ರೈಲಿನಲ್ಲಿ ಕಳೆದುಕೊಂಡಿದ್ದ ಪಾಸ್ಪೋರ್ಟ್, ಕೈಚೀಲ ಮರಳಿ ವಿದೇಶಿ ಪ್ರವಾಸಿಗನ ಬಳಿಗೆ

ವಿದೇಶಿಗನಿಗೆ ಪಾಸ್ಫೋರ್ಟ್, ಕೈಚೀಲ ವಿತರಿಸುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಫಿನ್ಲ್ಯಾಂಡ್ ಮೂಲದ ವಿದೇಶಿ ಪ್ರವಾಸಿಗನೊಬ್ಬನ ಪಾಸ್ಪೋರ್ಟ್ ಹಾಗೂ ಕೈಚೀಲವೊಂದು ಗೋವಾ-ಮಂಗಳೂರು ಮಾರ್ಗವಾಗಿ ಸಂಚರಿಸುವ ರೈಲಿನಲ್ಲಿ ಭಟ್ಕಳದ ವ್ಯಕ್ತಿಯೊಬ್ಬನಿಗೆ ಸಿಕ್ಕಿದ್ದು, ಇದನ್ನು ವಿದೇಶಿ ಪ್ರವಾಸಿಗನಿಗೆ ಗ್ರಾಮೀಣ ಠಾಣೆಯಲ್ಲಿ ಬುಧವಾರ ರಾತ್ರಿ ವಿತರಿಸಲಾಯಿತು.

ಮಂಗಳವಾರದಂದು ರೈಲಿನಲ್ಲಿ ಗೋವಾದಿಂದ ಭಟ್ಕಳ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಭಟ್ಕಳದ ಕಾರಗದ್ದೆಯ ಮಹ್ಮದ್ ರಫೀಕ್ ಎನ್ನುವವರಿಗೆ ವಿದೇಶಿ ಪ್ರವಾಸಿಗನೊಬ್ಬನ ಪಾಸ್ಪೋರ್ಟ್ ಸೇರಿ ಒಂದು ಕೈ ಚೀಲ ಸಿಕ್ಕಿದ್ದು, ಪತ್ತೆಯಾದ ಪಾಸ್ಪೋರ್ಟ್ ಹಾಗೂ ಕೈಚೀಲವನ್ನು ತಕ್ಷಣ ಗ್ರಾಮೀಣ ಪೋಲೀಸ್ ಠಾಣೆಯ ಪೋಲೀಸರಿಗೆ ಒಪ್ಪಿಸಿದ್ದರು. ನಂತರ ಗ್ರಾಮೀಣ ಪೊಲೀಸ್ ಠಾಣೆ ಎಸೈ ನವೀನ್ ಬೋರರ್ಕರ್ ತಕ್ಷಣ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಈ ಸಂದರ್ಭದಲ್ಲಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪಾಸ್ಪೋರ್ಟ್ ಕಳೆದುಕೊಂಡ ಬಗ್ಗೆ ದೂರು ನೀಡಬೇಕೆಂದು ವಿದೇಶಿ ಪ್ರವಾಸಿಗ ಎಲ್ಸಿಲಾ ಜಾರ್ಮೋ ಎನ್ನಾರಿ ಹೋದಾಗ ಕಳೆದುಕೊಂಡ ಪಾಸ್ಪೋರ್ಟ್ ಹಾಗೂ 1 ಕೈಚೀಲ ಪತ್ತೆಯಾದ ಬಗ್ಗೆ ಗೊತ್ತಾಗಿದೆ. ನಂತರ ಎಲ್ಸಿಲಾ ಜಾರ್ಮೋ ಎನ್ನಾರಿ ಬುಧವಾರದಂದು ರಾತ್ರಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಪಾಸ್ಪೋರ್ಟ್ ಹಾಗೂ ಕೈಚೀಲ ಪಡೆದಿದ್ದಾನೆ.