ದಫನಕ್ಕೆ ಭೂಮಿ ಸಿಗದೆ ವೃದ್ಧೆಯ ಹೆಣದೊಂದಿಗೆ 2 ದಿನ ಕಾದ ಕುಟುಂಬ

ಮೈಸೂರು : ದಫನ ಭೂಮಿ ಇಲ್ಲವೆಂಬ ಕಾರಣಕ್ಕೆ ಚಾಮರಾಜ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಳಿಪುರ ಗ್ರಾಮದಲ್ಲಿ ಮೃತಪಟ್ಟ ದಲಿತ ಕುಟುಂಬವೊಂದರ 90ರ ವೃದ್ಧೆಯ ಅಂತ್ಯಕ್ರಿಯೆ ನಡೆಸಲು ಎರಡು ದಿನ ಅಸಾಧ್ಯವಾಗಿ ಕೊನೆಗೆ ಉಪಾಯವಿಲ್ಲದೆ ನೀರಾವರಿ ಕಾಲುವೆ ಸಮೀಪದ ಸ್ಥಳವೊಂದರಲ್ಲಿ ಹೂಳಲಾಗಿದೆ. ರಂಗಮ್ಮ ಎಂಬ ಮಹಿಳೆ ಮೃತಪಟ್ಟಾಗ ಆಕೆಯ ಕುಟುಂಬ ಆಕೆಯ ಅಂತ್ಯಕ್ರಿಯೆ ನಡೆಸಲು ಸ್ಥಳವಿಲ್ಲದೆ ಪಡಬಾರದ ಪಾಡು ಪಟ್ಟಿದೆ.
ಗುಳಿಪರ ಗ್ರಾಮದಲ್ಲಿ ವಾಸವಾಗಿರುವ 310 ನಾಯಕ ಸಮುದಾಯದ ಹಾಗೂ 270 ವೀರಶೈವ ಸಮುದಾಯದ ಕುಟುಂಬಗಳಿಗೆ ಅವುಗಳದ್ದೇ ಆದ ಪ್ರತ್ಯೇಕ ಧಫನ ಭೂಮಿ ಇದೆಯಾದರೂ ಸುಮಾರು 65 ದಲಿತ ಕುಟುಂಬಗಳಿಗೆ ಪ್ರತ್ಯೇಕ ದಫನ ಭೂಮಿಯಿಲ್ಲದ ಕಾರಣ ಕಳೆದ ಹಲವಾರು ವರ್ಷಗಳಿಂದ ಯಾರಾದರೂ ದಲಿತರು ಸತ್ತರೆ ಖಾಸಗಿ ಭೂಮಿಯೊಂದರಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿತು.
ಆದರೆ ಸರಕಾರ ಈ ಖಾಸಗಿ ಭೂಮಿಯಲ್ಲಿ 5 ಎಕರೆ ಖರೀದಿಸಿ ಅವುಗಳನ್ನು ಸೈಟುಗಳಾಗಿ ಪರಿವರ್ತಿಸಿದಂದಿನಿಂದ ದಲಿತರಿಗೆ ಸಮಸ್ಯೆ ಎದುರಾಗಿದೆ. ಅಧಿಕಾರಿಗಳು ತಮ್ಮ ಸಹಾಯಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ದೂರಿದ್ದರೆ ಗ್ರಾಮಸ್ಥರು ತಮಗೆ ಯಾ ಸ್ಥಳೀಯ ತಹಸೀಲ್ದಾರ್ ಅವರಿಗೆ ಮಾಹಿತಿ ನೀಡಿಲ್ಲ ಎಂದು ಜಿಲ್ಲಾಧಿಕಾರಿ ರಾಜು ಹೇಳಿದ್ದಾರೆ. ಧಫನ ಭೂಮಿಗಾಗಿ ಒಂದು ಎಕರೆ ಖಾಸಗಿ ಜಾಗವನ್ನು ಗುರುತಿಸುವಂತೆ ಇಲ್ಲವೇ ನಾಯಕ ಸಮುದಾಯಕ್ಕೆ ತನ್ನ ಬಳಿಯಿರುವ 10 ಗುಂಟಾ ಜಮೀನು ಈ ಉದ್ದೇಶಕ್ಕಾಗಿ ನೀಡುವಂತೆ ಕೇಳಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.