ಫುಟ್ಬೋರ್ಡಲ್ಲಿ ನಿಂತಿದ್ದ ಬಸ್ ಪ್ರಯಾಣಿಕ ಕೆಳಬಿದ್ದು ಗಂಭೀರ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ವಿಟ್ಲ : ಚಾಲಕ ಮತ್ತು ನಿರ್ವಾಹಕರ ಬೇಜವಾಬ್ದಾರಿಯಿಂದಾಗಿ ಸರಕಾರಿ ಬಸ್ಸಿನಲ್ಲಿದ್ದ ಪ್ರಯಾಣಿಕನೊಬ್ಬ ಕಂಬಳೆಬೆಟ್ಟು ಎಂಬಲ್ಲಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ.

ಮಂಜೇಶ್ವರ-ವಿಟ್ಲ-ಪುತ್ತೂರು ಮಧ್ಯೆ ಸಂಚರಿಸುವ ಸರಕಾರಿ ಬಸ್ ವಿಟ್ಲದಿಂದ ಪುತ್ತೂರಿಗೆ ಹೋಗುತ್ತಿದ್ದ ಸಂದರ್ಭ ಕಂಬಳೆಬೆಟ್ಟುವಿನಲ್ಲಿ ಪ್ರಯಾಣಿಕ ಮುಳಿಯ ನಿವಾಸಿ ದಿನೇಶ್ ಎಂಬಾತ ರಸ್ತೆಗೆ ಬಿದ್ದಿದ್ದಾನೆ. ನಿಗದಿತ ಪ್ರಮಾಣಕ್ಕಿಂತ ಅಧಿಕ ಪ್ರಯಾಣಿಕರಿದ್ದ ಕಾರಣ ಫುಟ್ಬೋರ್ಡಲ್ಲಿ ನಿಂತಿದ್ದ ಯುವಕ ಚಲಿಸುತ್ತಿದ್ದ ಬಸ್ಸಿಂದ ರಸ್ತೆಗೆ ಬಿದ್ದಿದ್ದಾನೆಂದು ಇತರ ಪ್ರಯಾಣಿಕರು ತಿಳಿಸಿದ್ದಾರೆ.

ಕೆಳಕ್ಕೆ ಬಿದ್ದ ದಿನೇಶನ ಮುಖ ಮತ್ತು ಕೈಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರು ತುರ್ತು ವಾಹನದ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿರುವ ಗಾಯಾಳು ಮಾತನಾಡುವ ಸ್ಥಿತಿಯಲ್ಲಿಲ್ಲದ ಕಾರಣ ಹೆಚ್ಚಿನ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ.