ಆಹಾರದ ಆಯ್ಕೆ ಎತ್ತಿಹಿಡಿದ ಹೈ

ಅಲಹಾಬಾದ್ : ಜನಸಾಮಾನ್ಯರ ಆಹಾರ ಪದ್ಧತಿಗಳು ಉತ್ತರ ಪ್ರದೇಶದ ಸೆಕ್ಯುಲರ್ ಸಂಸ್ಕøತಿಯ ಅವಿಭಾಜ್ಯ ಅಂಗ ಎಂದು ವ್ಯಾಖ್ಯಾನಿಸಿರುವ ಅಲಹಾಬಾದ್ ಹೈಕೋರ್ಟ್ ಸಂವಿಧಾನ ನೀಡಿರುವ ಜೀವನದ ಹಕ್ಕಿನ ಅಡಿಯಲ್ಲೇ ಆಹಾರ ಮತ್ತು ಆಹಾರ ಪದಾರ್ಥಗಳ ವ್ಯಾಪಾರದ ಹಕ್ಕುಗಳೂ ಅಡಕವಾಗಿವೆ ಎಂದು ಹೇಳಿದೆ.

ಕಸಾಯಿಖಾನೆಗಳ ಲೈಸೆನ್ಸ್ ನವೀಕರಣದಲ್ಲಿ ವಿಳಂಬವಾಗುತ್ತಿರುವುದರ ವಿರುದ್ಧ ವ್ಯಾಪಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಲಕ್ನೋ ಪೀಠ ವಿಚಾರಣೆಗೊಳಪಡಿಸಿದೆ.  ರಾಜ್ಯ ಸರ್ಕಾರ ಅಧಿಕಾರ ವಹಿಸಿಕೊಂಡ ಕೂಡಲೇ ಮಾಂಸದಂಗಡಿಗಳನ್ನು ಮುಚ್ಚಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ಆರೋಗ್ಯಕರವಾದ ಯಾವುದೇ ಆಹಾರವನ್ನು ತಪ್ಪು ಆಯ್ಕೆ ಎನ್ನಲಾಗದು ಎಂದು ಹೇಳಿದೆ.

ಅಕ್ರಮ ಕಸಾಯಿಖಾನೆಗಳ ವಿರುದ್ಧ ಮಾತ್ರ ಕ್ರಮ ಜರುಗಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವುದರ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಜರುಗಿಸಿದೆ ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ. ಆದರೆ ಸರ್ಕಾರ ಏಕಾಏಕಿ ಪ್ರಹಾರ ನಡೆಸಿದ ಮಾಂಸದಂಗಡಿಗಳನ್ನು, ಕಸಾಯಿಖಾನೆಗಳನ್ನು ಬಂದ್ ಮಾಡಿರುವುದರ ವಿರುದ್ಧ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಸರ್ಕಾರ ಈ ಕ್ರಮ ಜರುಗಿಸುವ ಮುನ್ನ ಜನರ ಆರೋಗ್ಯ, ಸಂಸ್ಕøತಿ, ವೈಯಕ್ತಿಕ ಆಹಾರಪದ್ಧತಿಗಳು, ಸಮಾಜದ ಆರ್ಥಿಕ ಪರಿಸ್ಥಿತಿ, ಕೈಗೆಟುಕುವ ದರದಲ್ಲಿ ಆಹಾರದ ಲಭ್ಯತೆ, ಕೊರತೆ ಇಲ್ಲದ ಸರಬರಾಜು, ಗುಣಮಟ್ಟ ಮತ್ತು ಜೀವನಕ್ಕೆ ಅವಶ್ಯವಾದ ಆಹಾರದ ಸಾಮಥ್ರ್ಯ ಇವೆಲ್ಲವನ್ನೂ ಪರಿಗಣಿಸಬೇಕಿತ್ತು ಎಂದು ಕೋರ್ಟ್ ಹೇಳಿದೆ.  ಅಕ್ರಮ ಉದ್ದಿಮೆಗಳನ್ನು ಬಂದ್ ಮಾಡುವ ಮುನ್ನ ಸಕ್ರಮವಾಗಿರುವ ಅಂಗಡಿಗಳು ಸುಗಮವಾಗಿ ನಡೆಯುವಂತೆ ಎಚ್ಚರ ವಹಿಸಬೇಕು ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದೆ. ಲೈಸೆನ್ಸ್ ಹೊಂದಿರುವ ಮಾಂಸದಂಗಡಿಗಳು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಜನರು ಪರದಾಡುವಂತಾಗಿದೆ, ಜಿಲ್ಲಾ ಪಂಚಾಯತ್ ಮತ್ತು ಪುರಸಭೆಗಳು ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಕೊರ್ಟ್ ಆದೇಶಿಸಿದೆ.  ಈ ಸಮಸ್ಯೆಗಳನ್ನು ಕೂಡಲೇ ಚರ್ಚಿಸಿ ಬಗೆಹರಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಹೈಕೋರ್ಟ್ ಪೀಠ ಕಟ್ಟಾಜ್ಞೆ ನೀಡಿದೆ.