ಹಣ ಪಾವತಿಸಲು ವಿಳಂಬಿಸಿದ ಕೇಂದ್ರ : 53 ಲಕ್ಷ ಟನ್ ಆಹಾರ ಧಾನ್ಯ ವೇಸ್ಟ್

ಆದರೆ ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ಮಾರ್ಚ್ 2016ರ ವೇಳೆಗೆ 53 ಲಕ್ಷ ಟನ್ ಆಹಾರ ಪದಾರ್ಥಗಳು ಸಂಗ್ರಹಕ್ಕೆ ಸ್ಥಳವಿಲ್ಲದೆ ರಸ್ತೆಗಳಲ್ಲಿ ಒಣಗಿವೆ. ಐದು ಲಕ್ಷ ಟನ್ನಿಗೂ ಹೆಚ್ಚಿನ ಆಹಾರ ಧಾನ್ಯಗಳು ಕೊಳೆಯುತ್ತಿವೆ.

  •   ರಾಜೀವ್ ಷಾ

ಕಳೆದ ಜೂನ್ ಮಾಸದಲ್ಲಿ ದೇಶದ ಅಸಂಖ್ಯಾತ ರೈತರು ತಮ್ಮ ಫಸಲಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ ಎಂದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕೇಳಿಬಂದ ಪ್ರಮುಖ ಆರೋಪ ಎಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರು ಬೆಳೆದ ಬೆಳೆಯನ್ನು ಕನಿಷ್ಟ ಬೆಂಬಲ ಬೆಲೆಗೆ ಕೊಂಡುಕೊಳ್ಳಲಿಲ್ಲ ಎನ್ನುವುದು. ಅಕ್ಕಿ ಮತ್ತು ಗೋಧಿ ಯಾವುದೇ ಧಾನ್ಯವಾದರೂ ಸರ್ಕಾರ ತಮ್ಮ ಫಸಲನ್ನು ಖರೀದಿಸಲು ಸಮರ್ಥವಾದ ಸಾಂಸ್ಥಿಕ ವೇದಿಕೆಯನ್ನು ಸೃಷ್ಟಿಸಿಲ್ಲ ಎಂದು ರೈತರು ಆರೋಪಿಸುತ್ತಾರೆ. ಇದರಿಂದ ದೇಶದ ಹಲವಾರು ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರಗಳಲ್ಲಿ ಧಾನ್ಯ ಸಂಗ್ರಹಣೆಯೇ ಸ್ಥಗಿತಗೊಂಡಿದೆ. 2011ರ ನಂತರ ದೇಶದ ಆಹಾರ ನಿಗಮ ಕೋರಿದ್ದ ಸಬ್ಸಿಡಿಯಲ್ಲಿ ಕೇಂದ್ರ ಸರ್ಕಾರ ಕೇವಲ ಶೇ 67ರಷ್ಟನ್ನು ಮಾತ್ರ ಬಿಡುಗಡೆ ಮಾಡಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ. ಇದರಿಂದ ರೈತರು ತಮ್ಮ ನಿತ್ಯ ವ್ಯವಹಾರ ನಡೆಸಲು ಹೆಚ್ಚಿನ ಬಡ್ಡಿಗೆ ಹಣ ಪಡೆಯುವಂತಾಗಿದ್ದು, ಒಟ್ಟು 35 ಸಾವಿರ ಕೋಟಿ ರೂ ಬಡ್ಡಿ ಪಾವತಿಸಲಾಗಿದೆ. ಇದು ನಿಗಮದಿಂದ ಆಗ್ರಹಿಸಲಾಗಿದ್ದ ಸಬ್ಸಿಡಿ ಮೊತ್ತದ ಶೇ 33ರಷ್ಟು ಮಾತ್ರವಾಗಿದೆ. 1964ರಲ್ಲಿ ಸ್ಥಾಪನೆಯಾದ ಭಾರತೀಯ ಆಹಾರ ನಿಗಮ ಸರ್ಕಾರದ ಆಶ್ವಾಸನೆಯಂತೆ ರೈತರಿಂದ ಅಕ್ಕಿ ಮತ್ತು ಗೋಧಿಯನ್ನು ಕನಿಷ್ಟ ಬೆಂಬಲ ಬೆಲೆ ನೀಡಿ ಖರೀದಿಸುತ್ತದೆ. ಅಹಾರವನ್ನು ಸಂಗ್ರಹಿಸಿ ಪಡಿತರ ವ್ಯವಸ್ಥೆಯ ಮೂಲಕ ಬಡ ಜನತೆಗೆ ಒದಗಿಸುವುದು ಆಹಾರ ನಿಗಮದ ಆದ್ಯತೆಯಾಗಿದೆ. ಆದರೆ ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ಮಾರ್ಚ್ 2016ರ ವೇಳೆಗೆ 53 ಲಕ್ಷ ಟನ್ ಆಹಾರ ಪದಾರ್ಥಗಳು ಸಂಗ್ರಹಕ್ಕೆ ಸ್ಥಳವಿಲ್ಲದೆ ರಸ್ತೆಗಳಲ್ಲಿ ಒಣಗಿವೆ. ಐದು ಲಕ್ಷ ಟನ್ನಿಗೂ ಹೆಚ್ಚಿನ ಆಹಾರ ಧಾನ್ಯಗಳು ಕೊಳೆಯುತ್ತಿವೆ.