ನಾಲ್ಕೂವರೆ ವರ್ಷದಲ್ಲಿ ಆಹಾರ ಇಲಾಖೆಯ 19 ಆಯುಕ್ತರ ವರ್ಗ

ಸಾಂದರ್ಭಿಕ ಚಿತ್ರ

ಹೇಗಿದೆ ನಮ್ಮ ಆಡಳಿತ ವ್ಯವಸ್ಥೆ ?

ಬೆಂಗಳೂರು : ಕಳೆದ ನಾಲ್ಕೂವರೆ ವರ್ಷದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ 19 ಮಂದಿ ಆಯುಕ್ತರನ್ನು ಕಂಡಿದೆ. ಇದರಿಂದ ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.

ಈ ಮೂಲಕ ಸುಪ್ರೀಂ ಕೋರ್ಟಿನ ನಿರ್ದೇಶನವೊಂದರ ಉಲ್ಲಂಘನೆಯಾಗಿದ್ದು, ಬಹು-ಜನಪ್ರಿಯ `ಅನ್ನಭಾಗ್ಯ’ ಯೋಜನೆ ಜಾರಿಯಾದ ಬಳಿಕವೇ ಆಹಾರ/ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರು ಆಗಾಗ್ಗೆ ವರ್ಗಗೊಂಡಿದ್ದಾರೆ. ಈ ಬೆಳವಣಿಗೆ ಬಗ್ಗೆ ವಿಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಕಾಯ್ದೆಗಳು/ನೀತಿಗಳ ಅನುಷ್ಠಾನ ಅಧಿಕಾರ ಎಲ್ಲ ಇಲಾಖೆಗಳ ಆಯುಕ್ತರಿಗೆ ಇದೆ. ಈ ಕೇಸಿನಲ್ಲಿ ಆಯುಕ್ತರು ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಸೊತ್ತು ಮತ್ತು ಇತರ ವಸ್ತುಗಳ ಹಂಚಿಕೆ ಅಧಿಕಾರ ಹೊಂದಿದ್ದಾರೆ. ಅಲ್ಲದೆ, ರೇಶನ್ ಕಾರ್ಡುಗಳ ರದ್ಧತಿ ಹಾಗೂ ರೇಶನ್ ಕಳ್ಳದಂಧೆ ವಿರುದ್ಧ ಕ್ರಮ ಅಧಿಕಾರ ಹೊಂದಿದ್ದಾರೆ.

ಕಳೆದ ನಾಲ್ಕೂವರೆ ವರ್ಷದಲ್ಲಿ ಈ ಇಲಾಖೆಗೆ ನಿಯುಕ್ತರಾಗಿರುವ 19 ಮಂದಿ ಆಯುಕ್ತರಲ್ಲಿ ಕೆಲವರು ಒಂದು ವರ್ಷ, ಇನ್ನೊಬ್ಬರು ಕೇವಲ ಮೂರು ದಿನ ಅಧಿಕಾರದಲ್ಲಿದ್ದರು. ಇಲಾಖೆಗೆ 14 ಮಂದಿ ಆಯುಕ್ತರು ವರ್ಗಗೊಂಡಿದ್ದರೆ, ನಾಲ್ಕು ಮಂದಿ ಪ್ರಭಾರಿ ಅಧಿಕಾರ ನಡೆಸಿದ್ದರು. ಇಲಾಖೆಗೆ ನಿಯುಕ್ತರಾದ ಬಹುತೇಕ ಆಯುಕ್ತರು ಹೆಚ್ಚೆಂದರೆ ಮೂರು ತಿಂಗಳು ಅಧಿಕಾರದಲ್ಲಿದ್ದರು. ಮನೋಜ್ ಕುಮಾರ್ ಎಂಬವರು ಕೇವಲ ಮೂರು ದಿನದಲ್ಲಿ ಬೇರೆಡೆಗೆ ವರ್ಗವಾಗಿದ್ದರು. ನವೀನ್ ರಾಜಸಿಂಹ ಒಂದು ತಿಂಗಳು ಅಧಿಕಾರದಲ್ಲಿದ್ದರು. ಜನ್ನು ಮತ್ತು ಅಜಯ್ ನಾಗಭೂಷಣ ಒಂದೂವರೆ ತಿಂಗಳು ಅಧಿಕಾರದಲ್ಲಿದ್ದರು. ಮೇ 7ರಂದು ಆಯುಕ್ತ ಅಜಯ್ ತಿವಾರಿ ಲಕ್ನೋದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಅಚ್ಚರಿಯೆಂದರೆ, ನಾಲ್ಕೂವರೆ ವರ್ಷದ ವಧಿಯಲ್ಲಿ ಇಲಾಖೆ ಇಬ್ಬರು ಸಚಿವರನ್ನು (ದಿನೇಶ್ ಗುಂಡೂರಾವ್, ಖಾದರ್) ಕಂಡಿದೆ.

LEAVE A REPLY