ದೂರು ನೀಡಲು ಬಂದವರಿಗೆ ಪೊಲೀಸರ ಹಲ್ಲೆ ದೂರು ಸ್ವೀಕರಿಸಲು ನಿರಾಕರಣೆ

ಹಿರೇಗುತ್ತಿ ಚೆಕ್ ಪೋಸ್ಟ್ಟಿನಲ್ಲಿ ವಸೂಲಿ ದಂಧೆ

ನಮ್ಮ ಪ್ರತಿನಿಧಿ ವರದಿ

ಕುಮಟಾ :  ಚೆಕ್ ಪೋಸ್ಟಿನಲ್ಲಿ ನಡೆಯುತ್ತಿದ್ದ ವಸೂಲಿ ದಂಧೆಯ ವಿರುದ್ಧ ಪೊಲೀಸ್ ಕಂಟ್ರೋಲ್ ರೂಮಿಗೆ ಕಂಪ್ಲೆಂಟ್ ನೀಡಿದ ವ್ಯಕ್ತಿಗೆ ಹಾಗೂ ಅವನ ಕುಟುಂಬದ ಮೇಲೆ ರಾತ್ರೋರಾತ್ರಿ ಡಕಾಯಿತರಂತೆ ಹಲ್ಲೆ ನಡೆಸಿದ ವಿದ್ಯಮಾನ ಇಡೀ ಜಿಲ್ಲೆಯ ಜನತೆಯನ್ನೇ ಬೆಚ್ಚಿ ಬಿಳಿಸಿದೆ.

ನೈತಿಕ ಪೊಲೀಸಗಿರಿಯ ಪರಮಾವಧಿ ಎಲ್ಲಿಯವರೆಗೆ ಮುಟ್ಟಿದೆ ಎಂದರೆ ದೌರ್ಜನ್ಯಕ್ಕೊಳಗಾದವರು ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದರೂ ಸ್ವೀಕರಿಸಿಲ್ಲ. “ಯಾರಿಗೆ ಬೇಕಾದರೂ ಕಂಪ್ಲೆಂಟ್ ಮಾಡಿ ನಾವು ಕ್ಯಾರ್ ಮಾಡಲ್ಲ” ಎಂದು ಅವರಿಗೆ ಗದರಿಸಿರುವುದನ್ನು ಗಮನಿಸಿದರೆ ಪೊಲೀಸ್ ಅಧಿಕಾರಿಗಳು ಬ್ರಿಟಿಷ್ ಕಾಲದ ದರ್ಪ ಇನ್ನೂ ಬಿಟ್ಟಿಲ್ಲ ಎಂಬಂತೆ ಭಾಸವಾಗುತ್ತದೆ.

ಹಿರೇಗುತ್ತಿ ನಿವಾಸಿ ಶಾಂತರಾಮ ಪ್ರಭು ಹಾಗೂ ಅವರ ಪತ್ನಿ ಸುಮಾ ಮತ್ತು ವೃದ್ಧ ಅಪ್ಪ ಮಾಧವ ಎಂಬುವವರು ಪೊಲೀಸ್ ದೌರ್ಜನ್ಯಕ್ಕೊಳಗಾದವರು. ಹಿರೇಗುತ್ತಿ ತನಿಖಾ ಠಾಣೆಯ ಸಿಬ್ಬಂದಿ ಮೋಹನ ಗೌಡ, ನಿತ್ಯ 108 ವಾಹನದ ಚಾಲಕ ನಾಗರಾಜ ಗಣಪತಿ ನಾಯಕ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಾಗರಾಜ ನಾಯಕ ಹಲ್ಲೆ ನಡೆಸಿದವರಾಗಿದ್ದಾರೆ.