ಬರಿಗೈಲಿ ಹಿಂತಿರುಗುತ್ತಿವೆ ಮೀನುಗಾರಿಕಾ ಬೋಟುಗಳು ; ಮೀನುಗಾರರ ಅಳಲು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸಮುದ್ರದಲ್ಲಿ ಮೀನಿನ ಇಳುವರಿ ಕಡಿಮೆಯಾಗಿದೆ, ಮೀನುಗಾರಿಕೆಗೆ ಒಯ್ದಿರುವ ಬೋಟುಗಳು ಬರಿಗೈಲಿ ಹಿಂದಿರುಗುತ್ತಿವೆ ಎಂದು ಮೀನುಗಾರರು ಅಳಲು ತೋಡಿಕೊಂಡಿದ್ದಾರೆ.

ಆಳ ಸಮುದ್ರ ಮೀನುಗಾರಿಕೆಯಲ್ಲಿ ಕಳೆದ 10 ದಿನಗಳಿಂದ ಮೀನುಗಳೇ ಸಿಗುತ್ತಿಲ್ಲ, ರೂ 50,000 ಸಾವಿರಕ್ಕೂ ಅಧಿಕ ನಷ್ಟದ ಅನುಭವವಾಗಿದೆ ಎಂದು ಎಳೆಬಲೆ ದೋಣಿ ನಿರ್ವಾಹಕ ಸತೀಶ್ ಹೇಳಿದ್ದಾರೆ. ಸತೀಶ್ ಅವರ ದೋಣಿ ಹಳೆ ಬಂದರಿಗೆ ಬಂದು ತಲುಪಿದ್ದ ಸಂದರ್ಭ ಈ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.

“ನಿಜಕ್ಕೂ ಮೀನುಗಾರಿಕೆ ಅಪಾಯಕಾರಿ ವೃತ್ತಿ. 20 ದೋಣಿಗಳನ್ನು ಒಂದು ದಿನ ಮೀನುಗಾರಿಕೆಗೆ ಬಿಟ್ಟರೆ, ಕೇವಲ ಒಂದು ದೋಣಿಗೆ ಮಾತ್ರ ಮೀನು ದೊರೆತಿರುತ್ತದೆ. ಉಳಿದ ಎಲ್ಲಾ ದೋಣಿಗಳು ಮೀನುಗಳಿಲ್ಲದೆ ಸೊರಗುತ್ತವೆ. ಮೀನುಗಳ ಕೊರತೆ ಮತ್ತು ಡೀಸಿಲ್ ಬೆಲೆ ಏರಿಕೆಯ ಆಘಾತದಿಂದ ತತ್ತರಿಸಿದ್ದೇನೆ, ಹಣಕಾಸು ಸಮಸ್ಯೆಯಿಂದ ಬಳಲುತ್ತಿದ್ದೇನೆ” ಎಂದು ಎಳೆಬಲೆ ದೋಣಿ ನಿರ್ವಾಹಕರಾಗಿರುವ ಸತೀಶ್ ಹೇಳಿದ್ದಾರೆ.

“ಸುಮಾರು 1,040 ಎಳೆಬಲೆ ದೋಣಿಗಳ ಪೈಕಿ ಶೇಕಡಾ 95ರಷ್ಟು ದೋಣಿಗಳು ನಿರ್ವಹಣೆಯನ್ನೇ ನಿಲ್ಲಿಸಿವೆ. ಈ ದೋಣಿಗಳು ಬಂದರಿಗೆ ಸೇರ್ಪಡೆಯಾಗಿವೆ” ಎಂದು ಇನ್ನೊಬ್ಬ ಎಳೆಬಲೆ ದೋಣಿ ನಿರ್ವಾಹಕ ಚಂದ್ರ ಆರ್ ಸುವರ್ಣ ಹೇಳಿದ್ದಾರೆ.

“ಎಳೆಬಲೆ ದೋಣಿಗೆ 10 ದಿನಕ್ಕೆ ಕನಿಷ್ಟ 5,000 ಲೀಟರ್ ಡೀಸಿಲ್ ಅಗತ್ಯವಿದೆ. ಮೀನುಗಾರರು ಲೀಟರಿಗೆ ರೂ 52 ರಂತೆ ರೂ. 2.6 ಲಕ್ಷ ಪಾವತಿಸಬೇಕು. ಸಬ್ಸಿಡಿ ಮೊತ್ತ ಕೂಡ ನಮ್ಮ ಖಾತೆಗೆ ತಲುಪಿಲ್ಲ, ಹಾಗಾಗಿ ನಮ್ಮ ಸಂಕಷ್ಟ ಇಮ್ಮಡಿಯಾಗಿದೆ” ಎಂದು ಮೀನುಗಾರ ಮುಖಂಡರು  ಹೇಳಿದ್ದಾರೆ.