ಗರಿಗೆದರಿತು ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸರಿಸುಮಾರು 15 ದಿನಗಳಿಂದ ಪ್ರಕ್ಷುಬ್ದಗೊಂಡಿದ್ದ ಕಡಲು ಇದೀಗ ಸಹಜ ಸ್ಥಿತಿಗೆ ಮರಳಿದೆ. ಓಖಿ ಚಂಡಮಾರುತದಿಂದ ಲಕ್ಷದ್ವೀಪಕ್ಕೆ ಸ್ಥಗಿತಗೊಂಡಿದ್ದ ಹಡಗುಯಾನ  ಪುನರಾರಂಭಗೊಂಡಿದ್ದು, ಮಂಗಳೂರು ಹಳೆ ಬಂದರಿನಿಂದ ಈಗಾಗಲೇ 10 ಸಣ್ಣ ಹಡಗುಗಳು ಲಕ್ಷದ್ವೀಪಕ್ಕೆ ಹೊರಟಿವೆ. ಇದೇ ವೇಳೆ ಬಂದರಿನಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದ ಮೀನುಗಾರಿಕಾ ಚಟುವಟಿಕೆಯೂ ಪುನರಾರಂಭಗೊಂಡಿದ್ದು, ದಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆಯೂ ಜೋರಾಗಿದೆ.

ಸರಕು ಹಡಗುಗಳು ಡಿಸೆಂಬರ್ 8ರಂದು ಲಕ್ಷದ್ವೀಪಕ್ಕೆ ಹೊರಡಬೇಕಾಗಿತ್ತು. ಆದರೆ 12ರಂದು ಬೆಳಿಗ್ಗೆ ಹಳೆ ಬಂದರು ದಕ್ಕೆಯಿಂದ ಪ್ರಯಾಣವನ್ನು ಬೆಳೆಸಿವೆ. ದಿನಬಳಕೆ ಆಹಾರ ವಸ್ತುಗಳು, ಮನೆ, ಕಟ್ಟಡ ನಿರ್ಮಾಣ, ಜಲ್ಲಿ, ಕಲ್ಲು, ಮರಳು, ಸಿಮೆಂಟ್ ಹೊತ್ತುಕೊಂಡು ಈಗಾಗಲೇ ಕೆಲವು ಹಡಗುಗಳು ತೆರಳಿದ್ದರೆ, ಇನ್ನು ಕೆಲವು ಹೊರಡಲು ಸಿದ್ಧತೆ ನಡೆಸಿವೆ. ಇಲ್ಲಿಂದ ಇನ್ನೂ 15 ಹಡಗುಗಳು ಸರಕನ್ನು ಹೇರಿಕೊಂಡು ಹೊರಡುವ ಸಿದ್ಧತೆಯಲ್ಲಿವೆ. ಇದೇ ಮೊದಲ ಬಾರಿಗೆ ಮಂಗಳೂರು ಹಳೇ ಬಂದರಿನಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹಡಗುಗಳ ಯಾನ ಆರಂಭಗೊಂಡಿದೆ.

ಲಕ್ಷದ್ವೀಪಕ್ಕೆ ಡಿಸೆಂಬರ್ 8ರಂದು ಹೊರಟಿದ್ದ ಪ್ಯಾಸೆಂಜರ್ ಹಡಗು ಅಮಿನಿ ಡ್ಯೂ ಮತ್ತೆ ಮಂಗಳೂರು ಹಳೆ ಬಂದರಿಗೆ ಆಗಮಿಸಿ ಮರು ಪ್ರಯಾಣದಲ್ಲಿ ಪ್ರಯಾಣಿಕರನ್ನು ಲಕ್ಷದ್ವೀಪಕ್ಕೆ ಕರೆದುಕೊಂಡು ಹೋಗಿದೆ. ಹಡಗು ಸುಮಾರು 150 ಮಂದಿ ಪ್ರಯಾಣಿಕರನ್ನು ಕರೆದೊಯ್ಯುವ ಸಾಮಥ್ರ್ಯವನ್ನು ಹೊಂದಿದೆ. ಮಂಗಳೂರು ಹಾಗೂ ಕೊಚ್ಚಿಯಲ್ಲಿ ಇದಕ್ಕೆ ಟಿಕೆಟ್ ನೀಡುವ ವ್ಯವಸ್ಥೆ ಮಾಡಲಾಗಿದೆ.

ಲಕ್ಷದ್ವೀಪದಲ್ಲಿ ಓಖಿ ಚಂಡಮಾರುತದ ಪರಿಣಾಮ ಭಾರೀ ತೂಫಾನುಗಳ ಹಿನ್ನೆಲೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಕಡಲು ಶಾಂತವಾಗಿದ್ದು, ಮೀನುಗಾರಿಕೆ ಸಹಿತ ಸರಕು ಹಡಗುಗಳು ತಮ್ಮ ಕಾರ್ಯವನ್ನು ಪ್ರಾರಂಭಿಸಿದ್ದು, ಮಂಗಳೂರು ಧಕ್ಕೆಯಲ್ಲಿ ಎಂದಿನಂತೆ ಚಟುವಟಿಕೆ ಪುನರಾರಂಭಗೊಂಡಿದೆ ಎನ್ನುತ್ತಾರೆ ಮೀನುಗಾರ ಮುಖಂಡರಾದ ಅಬ್ದುಲ್ ಖಾದರ್.