ಬಾವನ ಸಮರ್ಥಿಸಲು ಹೋದ ಆಪ್ತನಿಗೆ ಮೀನುಗಾರ ಮಹಿಳೆಯರಿಂದ `ಪೂಜೆ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಒಂದೆಡೆ ಸುರತ್ಕಲ್ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲು ಶಾಸಕ ಮೊಯ್ದಿನ್ ಬಾವ ಶತಾಯಗತಾಯ ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆಯಿಂದ ತಮ್ಮ ಪ್ರಾಣ ಹೋದರೂ ಸ್ಥಳಾಂತರಿತ ಮಾರುಕಟ್ಟೆಗೆ ಹೋಗಲ್ಲ ಎಂದು ಮೀನುಗಾರ ಮಹಿಳೆಯರು ಸೇರಿದಂತೆ ಇತರ ವ್ಯಾಪಾರಿಗಳೂ ಹಠ ಹಿಡಿದು ಕುಳಿತಿದ್ದು ಕಗ್ಗಂಟಾಗಿದ್ದು, ಶಾಸಕರು ತಮ್ಮ ಕಾಮಗಾರಿ ಕೆಲಸಗಳನ್ನು ಭರದಿಂದ ಮಾಡುತ್ತಲೇ ಇರುವುದು ಸ್ಪೋಟಕ ಸನ್ನಿವೇಶ ನಿರ್ಮಿಸಿದೆ.

ವ್ಯಾಪಾರಿಗಳನ್ನು ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳಾಂತರ ಮಾಡುವ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸಿದ್ದು, ಸುರತ್ಕಲ್ ಮಾರುಕಟ್ಟೆಯನ್ನು ನೆಲಸಮ ಮಾಡಲು ಶಾಸಕ ಹಲವು ತರದ ಕಸರತ್ತು ಮಾಡುತ್ತಿರೋದು ಇದೀಗ ಎಲ್ಲರಿಗೂ ಗೊತ್ತಾಗಿದೆ. ವ್ಯಾಪಾರಿಗಳ ಮನವೊಲಿಕೆ ಮಾಡುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಅವರ ಉಪಸ್ಥಿತಿಯಲ್ಲಿ ಸಭೆಯೊಂದನ್ನೂ ಆಯೋಜಿಸಲಾಯಿತು. ಅಷ್ಟೇ ಅಲ್ಲದೇ ಮಾರುಕಟ್ಟೆಯ ತ್ರೀಡಿ ವಿಡಿಯೋ ಬಿಡುಗಡೆ ಮಾಡಿ, ಸಿಂಗಾಪೂರ ಮಾದರಿಯ ಮಾರುಕಟ್ಟೆ ನಿರ್ಮಾಣವಾಗುತ್ತದೆ ಎಂದು ಜನತೆಯಲ್ಲಿ ಬಿಂಬಿಸಿದರು.

ಇದೀಗ ಈ ಎಲ್ಲಾ ವಿಚಾರಗಳಿಗೂ ಹೊಸ ಸೇರ್ಪಡೆ ಎಂಬಂತೆ ತನ್ನ ಆಪ್ತನೊಬ್ಬನ ಮೂಲಕ (ಈತನಿಗೆ ಸ್ಥಳೀಯವಾಗಿ  ಅಮಿತಾಬ್ ಬಚ್ಚನ್ ಎನ್ನುತ್ತಾರಂತೆ !) ತನ್ನನ್ನು ಬೆಂಬಲಿಸಿ ಮಾಧ್ಯಮದಲ್ಲಿ ಹೇಳಿಕೆ ಕೊಡಿಸಿದ್ದಾರೆ ಎಂಎಲ್ಲೆ. ಆದರೆ ಆಪ್ತನ ಹೇಳಿಕೆಗೆ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಕೆಲವು ದಿನಗಳ ಹಿಂದೆ ಈತ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮೀನು ಮಾರುಕಟ್ಟೆಯ ಮಹಿಳೆಯರ ಬಗ್ಗೆ ಮತ್ತು ವರ್ತಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದಕ್ಕೆ ಆಕ್ರೋಶಿತ ಮೀನು ಮಾರಾಟಗಾರ ಮಹಿಳೆಯರು ಒಟ್ಟಾಗಿ ಎಂಎಲ್ಲೆ ಆಪ್ತನ ಕಚೇರಿಗೆ ನುಗ್ಗಿ ಏಕವಚನದಲ್ಲಿ ಬಾಯಿಗೆ ಬಂದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೀನುಗಾರ ಮಹಿಳೆಯರು ಎಂಎಲ್ಲೆ ಆಪ್ತನ ಕಚೇರಿಗೆ ನುಗ್ಗಿ ಆತನನ್ನು ಏಕವಚನದಲ್ಲಿ ನಿಂದಿಸಿ ತರಾಟೆಗೆ ತೆಗೆದುಕೊಳ್ಳುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.