ಗಂಗೊಳ್ಳಿ ಬಂದರಿನ ಅಣೆಕಟ್ಟು ವಿಸ್ತರಣೆ ಯೋಜನೆಯಿಂದ ಮೀನುಗಾರರಿಗೆ ಬೇಸರ

ಉಡುಪಿ : ಸರ್ಕಾರ ಬಿಡುಗಡೆಗೊಳಿಸಿರುವ ಹಣ ಜನರ ಉಪಯೋಗಕ್ಕಾಗಿಯೋ ಅಥವಾ ಅಧಿಕಾರಿಗಳ ಲಾಭಕ್ಕಾಗಿಯೋ ? ಎಂಬುದು ಗಂಗೊಳ್ಳಿ ಮೀನುಗಾರರ ಪ್ರಶ್ನೆ.

ಹೌದು, ಗಂಗೊಳ್ಳಿ ಬಂದರಿನ ಅಣೆಕಟ್ಟು ವಿಸ್ತರಣೆಗೆಂದು ಸರ್ಕಾರ ರೂ 102.11 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಆದರೆ ಇದು ಅಧಿಕಾರಿಗಳು ಮತ್ತು ಕಾಂಟ್ರಾಕ್ಟರುಗಳ ಜೇಬು ತುಂಬಿಸುವ ಇನ್ನೊಂದು ಯೋಜನೆ ಎಂಬುದು ಮೀನುಗಾರರ ಆತಂಕ. ಏಕೆಂದರೆ ಇಲ್ಲಿ ಹೂಳೆತ್ತುವ ಕೆಲಸ ನಡೆಸದೆ ಅಣೆಕಟ್ಟು ನಿರ್ಮಿಸಿದರೆ ಅದರಿಂದ ಯಾವುದೇ ಪ್ರಯೋಜನವಾಗಲಾರದು ಎಂಬುದು ಮೀನುಗಾರರ ಅಭಿಪ್ರಾಯ.

ಐದು ನದಿಗಳು ಸೇರುವ ಗಂಗೊಳ್ಳಿ ಬಂದರು ಇತ್ತೀಚಿನ ದಶಕಗಳಲ್ಲಿ ಮೀನುಗಾರಿಕೆ ಚಟುವಟಿಕೆಯ ಬಿಡುವಿಲ್ಲದ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ.

ಹಾಗಿದ್ದರೂ ಈ ಸ್ಥಳದಲ್ಲಿ ಹೂಳು ತುಂಬಿ ಹೋಗಿರುವುದರಿಂದ ಹಲವಾರು ಅವಘಡಗಳು ಮತ್ತು ಜೀವ ನಷ್ಟಗಳು ಸಂಭವಿಸುತ್ತಿವೆ.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಗುರುವಾರ ಸುಮಾರು 102.11 ಕೋಟಿ ರೂ ವೆಚ್ಚದ ಅಣೆಕಟ್ಟು ವಿಸ್ತರಣೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದಾರೆ. ಯೋಜನೆ ಮೀನುಗಾರರ ಅನುಕೂಲಕ್ಕೆಂದು ಹೇಳಲಾಗಿದ್ದರೂ, ಕಾಂಟ್ರಾಕ್ಟರುಗಳನ್ನು ಹೊರತುಪಡಿಸಿದರೆ ಯಾರ ಮುಖದಲ್ಲೂ ನಗು ಬರಲು ಕಾರಣವಿಲ್ಲ.

ಅತ್ಯುಚ್ಚ ಮೀನುಗಾರಿಕೆಯ ಸಮಯ ಆಗಸ್ಟಿನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಪ್ರತಿಯೊಂದು ಬೋಟು ಕೂಡ ಗಂಗೊಳ್ಳಿ ಬಂದರನ್ನು ಪ್ರವೇಶಿಸಲು ಹರಸಾಹಸ ಪಡುತ್ತವೆ. 102.11 ಕೋಟಿ ರೂ ಖರ್ಚು ಮಾಡಿ ಅಣೆಕಟ್ಟು ವಿಸ್ತರಣೆ ಕೈಗೊಳ್ಳುವ ಇದೇ ಸಂದರ್ಭ ನಮ್ಮ ಬೇಡಿಕೆಯಾದ ಬಂದರಿನ ಹೂಳೆತ್ತುವ ಕೆಲಸವನ್ನು ಯಾಕೆ ಪೂರೈಸಬಾರದು ? ಹೂಳೆತ್ತದೆ ಅಣೆಕಟ್ಟು ವಿಸ್ತರಣೆ ಕೇವಲ ಕಾಂಟ್ರಾಕ್ಟರುಗಳ ಜೇಬು ತುಂಬಿಸುವ ಯೋಜನೆಯಾಗುತ್ತದೆ ಎಂದು ಕಳೆದ ಐದು ವರ್ಷಗಳಿಂದ ಇಲ್ಲಿ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿರುವ ಮಿಥುನ್ ಖಾರ್ವಿ ಅವರ ಅಭಿಪ್ರಾಯ.

ಈ ಬಂದರಿನಿಂದ ಸುಮಾರು 300 ಬೋಟುಗಳು ಕಾರ್ಯಾಚರಣೆ ನಡೆಸುತ್ತಿವೆ. ದೊಡ್ಡ ಪ್ರಮಾಣದಲ್ಲಿ ಇಲ್ಲಿ ಹೂಳು ತುಂಬಿರುವುದರಿಂದ ಸುಮಾರು 100 ಬೃಹತ್ ದೋಣಿಗಳು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಗಂಗೊಳ್ಳಿಯಲ್ಲಿ ಎದುರಾಗಿರುವ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಅನೇಕ ಯುವ ಮೀನುಗಾರರು ಕೇರಳದ ಕಣ್ಣೂರು ಮತ್ತು ತಳಶೇರಿ ಬಂದರಿನಿಂದ ಮೀನುಗಾರಿಕೆ ಕೆಲಸ ನಡೆಸುತ್ತಿದ್ದಾರೆ ಎಂದು ಮಿಥುನ್ ಹೇಳಿದ್ದಾರೆ.

ಹೂಳೆತ್ತುವ ಕಾರ್ಯಕ್ಕೆ 1.70 ಕೋಟಿ ರೂ ಹಣ ಬೇಕಾಗಬಹುದು. ಆದರೆ ಸರ್ಕಾರ 102.11 ಕೋಟಿ ರೂ ವೆಚ್ಚದ ಅಣೆಕಟ್ಟು ವಿಸ್ತರಣೆ ಯೋಜನೆಯನ್ನು ಕೈಗೊಂಡಿದೆ. ಯಾವುದು ಅಗತ್ಯವಿದೆಯೋ ಅದನ್ನು ಸರ್ಕಾರ ಕೈಗೊಳ್ಳುತ್ತಿಲ್ಲ ಎಂಬುದು ಮೀನುಗಾರರ ಅಳಲು.