ಮುಲ್ಕಿ ಬಸ್ ನಿಲ್ದಾಣದಲ್ಲಿ ಮೀನುಗಾರರ ಜಟಾಪಟಿ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಬಸ್ ನಿಲ್ದಾಣದಲ್ಲಿ ಕಾರ್ನಾಡಿನ ಮೀನುಗಾರ ಮಹಿಳೆಯರಿಗೂ ಮತ್ತು ಟೆಂಪೋದಲ್ಲಿ ಮೀನು ಮಾರಾಟ ಮಾಡುವವನ ನಡುವೆ ಸೋಮವಾರ ಸಂಜೆ ಜಟಾಪಟಿ ನಡೆದಿದೆ.

ನಿಲ್ದಾಣದ ಹೆದ್ದಾರಿಯಲ್ಲಿ ಕೆಲ ತಿಂಗಳಿನಿಂದ ಮೀನಿನ ಟೆಂಪೋದಲ್ಲಿ ಮೀನು ಮಾರಾಟ ಮಾಡುತ್ತಿದ್ದುದನ್ನು ಪ್ರಶ್ನಿಸಿ ಮುಲ್ಕಿಯಿಂದ ಸುಮಾರು ಒಂದು ಕಿ ಮೀ ಒಳಗಡೆ ಇರುವ ಕಾರ್ನಾಡಿನ ಮೀನು ಮಾರಾಟದ ಮಹಿಳೆಯರು ಮುಲ್ಕಿ ಬಸ್‍ನಿಲ್ದಾಣದ ಬಳಿ ಬಂದು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ  ಆತನ ಮೀನಿನ ಬುಟ್ಟಿಯನ್ನು ನೆಲಕ್ಕೆ ಬಿಸಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಮೀನುಗಾರ ಮಹಿಳೆಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ಮೀನುಗಾರ ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾರೆ.

ಮುಲ್ಕಿ ಹಾಗೂ ಕಾರ್ನಾಡಿನ ಪೇಟೆಗಳ ನಡುವೆ ಅಂತರವಿದ್ದು, ಹೆದ್ದಾರಿಯಲ್ಲಿ ಮೀನು ಮಾರಿದರೆ ತಪ್ಪೇನು ಎಂದು ಜನ ಮಹಿಳೆಯರನ್ನು ಪ್ರಶ್ನಿಸಿದ್ದಾರೆ. ಇದರಿಂದ ಸ್ಥಳೀಯರಿಗೂ ಮಹಿಳೆಯರಿಗೂ ಕೆಲ ಹೊತ್ತು ವಾಗ್ವಾದ ನಡೆದಿದ್ದು, ಜನ ಸೇರುತ್ತಿದ್ದಂತೆ ಮಹಿಳೆಯರು ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ. ಟೆಂಪೋದಲ್ಲಿ ಬರುವ ಮೀನು ಮಾರಾಟಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ಮೀನು ಮಾರಾಟ ಮಾಡುತ್ತಿದ್ದು, ಇದರಿಂದ ಮಹಿಳೆಯರ ಮೀನು ಮಾರಾಟಕ್ಕೆ ಹೊಡೆತ ಬೀಳುವ ಸಾಧ್ಯತೆ ಇರುವುದರಿಂದ ಜಟಾಪಟಿ ನಡೆದಿದೆ ಎಂದು ಸ್ಥಳೀಯ ರಿಕ್ಷಾ ಚಾಲಕ ವಿಲ್ಫಿ ಕೊಲ್ಲೂರು ಹೇಳಿದ್ದಾರೆ. ಬಳಿಕ ಪೊಲೀಸರು ಬಂದು ಸ್ಥಳದಲ್ಲಿ ಸೇರಿದವರನ್ನು ಚದುರಿಸಿದರು.