ಮೀನುಗಾರ ನೀರಿಗೆ ಬಿದ್ದು ಸಾವು

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಉಡುಪಿ : ಸಮುದ್ರದ ಅಲೆಗಳ ಅಬ್ಬರ ಜಾಸ್ತಿಯಿದ್ದ ಕಾರಣ ಬೋಟಿನಲ್ಲಿದ್ದ ಮೀನುಗಳನ್ನು ಖಾಲಿ ಮಾಡಿ ಬೋಟನ್ನು ಮಲ್ಪೆ ಬಂದರಿನ ಟೆಬ್ಮಾ ಶಿಪ್ ಯಾರ್ಡ್ ಬಳಿ ನಿಲ್ಲಿಸಲಾಗಿದ್ದ ವೇಳೆ ಬೋಟಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕಾಯುತ್ತಿದ್ದ ಮೀನುಗಾರನೊಬ್ಬ ನೀರಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ಮಲ್ಪೆಯಲ್ಲಿ ನಡೆದಿದೆ.

ಸ್ವಾಮಿ ದರ್ಶನ ಹೆಸರಿನ ಬೋಟಿನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಗೋಪಾಲ (52) ಮೃತ ಮೀನುಗಾರ. ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಇತರ ಮೀನುಗಾರರು ಊರಿಗೆ ಹೋಗಿದ್ದು, ಮೀನುಗಾರ ಗೋಪಾಲ ಮಾತ್ರ  ಬೋಟಿನಲ್ಲಿ ಬೆಲೆಬಾಳುವ ವಸ್ತುಗಳು ಇದ್ದುದರಿಂದ ಬೋಟಿನಲ್ಲಿ ರಾತ್ರಿ ಉಳಿದುಕೊಂಡಿದ್ದು, ಅವರ ಶವ ಬಂದರಿನ ನೀರಿನಲ್ಲಿ ಪತ್ತೆಯಾಗಿದೆ.

ರಾತ್ರಿ ವೇಳೆ ಮೀನಿನ ಬಲೆ ಸರಿಮಾಡುತ್ತಿದ್ದಾಗ ಅಥವಾ ಇನ್ನಾವುದೋ ಕಾರಣದಿಂದ ಗೋಪಾಲ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಸ್ವಾಮಿ ದರ್ಶನ ಬೋಟಿನಲ್ಲಿ ತಾಂಡೇಲನಾಗಿ ಕೆಲಸ ಮಾಡುವ ಕುಂದಾಪುರ ತಾಲೂಕಿನ ಕುಂಭಾಸಿ ಕೊರವಾಡಿ ನಿವಾಸಿ ನಾಗೇಶ್ ಪೂಜಾರಿ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.