ದಾಖಲೆ ಸಂಗ್ರಹ ನಿಲ್ಲಿಸಿದ ಮೀನುಗಾರಿಕಾ ಇಲಾಖೆ !

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಒಂದು ವೇಳೆ ಮಾಹಿತಿ ಆಕಾಂಕ್ಷಿಗಳು ಮೀನುಗಾರಿಕಾ ಇಲಾಖೆಯಿಂದ ಅಂಕಿಅಂಶ ಮಾಹಿತಿಗಳನ್ನು ಕೇಳಿದರೆ ಮೀನುಗಾರಿಕಾ ಇಲಾಖೆ ಕೈಚೆಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಮಾತ್ರವಲ್ಲ ದತ್ತಾಂಶ ಸಂಗ್ರಹಣೆಯನ್ನು ಬಹಳ ಸಮಯದ ಹಿಂದೆಯೇ ನಿಲ್ಲಿಸಲಾಗಿದೆ ಎಂದು ಘೋಷಿಸಬೇಕಾಗುತ್ತದೆ.

ಜಿಲ್ಲಾ ಮೀನುಗಾರಿಕಾ ಇಲಾಖೆಯ ಅಂಕಿ ಅಂಶಗಳ ಪ್ರಕಾರ 1018 ಯಾಂತ್ರೀಕೃತ ಬೋಟುಗಳು ಮತ್ತು 515 ಸಾಂಪ್ರದಾಯಿಕ ಬೋಟುಗಳಿವೆ. ಹಿಂದಿನ ವಿತ್ತೀಯ ವರ್ಷದಲ್ಲಿ ಅಂದರೆ 2015-16ರಲ್ಲಿ ಒಟ್ಟು 1,51,458 ಮೆಟ್ರಿಕ್ ಟನ್ನು ಮೀನು ಹಿಡಿಯಲಾಗಿದ್ದು, ಇದರ ಮೌಲ್ಯ ರೂ 1370.53 ಕೋಟಿ ಎಂದು ತಿಳಿಸುತ್ತದೆ.

ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಇಲಾಖೆಗಳ ಸುಮಾರು 12 ಮಂದಿ ಎಣಿಕಾ ಸಿಬ್ಬಂದಿಗೆ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕಾ ಇಲಾಖೆ ಬಿಡುಗಡೆಗೊಳಿಸುವ ನಿಧಿಯಿಂದ ಸಂಬಳ ನೀಡಲಾಗುತ್ತದೆ. ಆದರೆ 2016ರ ಅಕ್ಟೋಬರ್ ತಿಂಗಳಿನಿಂದ ಇಲಾಖೆ ನಿಧಿ ಬಿಡುಗಡೆ ಮಾಡಿಲ್ಲ. ಹಾಗಾಗಿ ಇಲಾಖೆಯಲ್ಲಿ ಇರುವ ಎಣಿಕೆದಾರರಿಗೆ ಸಂಬಳ ಪಾವತಿಸಿಲ್ಲ. ಪರಿಣಾಮವಾಗಿ ನವೆಂಬರ್ ತಿಂಗಳಿಂದ ಇಲಾಖೆಯ ಅಂಕಿ ಅಂಶ ಸಂಕಲನ ನಿಲುಗಡೆಯಾಗಿದೆ.

ಮೂಲಗಳ ಪ್ರಕಾರ ಮೀನುಗಾರಿಕಾ ಇಲಾಖೆಯು ಮೀನು ಹಿಡಿಯುವಿಕೆಯ ಅಂಕಿ ಅಂಶ ಸಂಗ್ರಹ ಮತ್ತು ಇತರ ದತ್ತಾಂಶ ಸಂಗ್ರಹಣೆಗೆ ಮಂಗಳೂರು ಸಂಶೋಧನಾ ಕೇಂದ್ರ `ಸೆಂಟ್ರಲ್ ಮರೈನ್ ಫಿಶರೀಸ್ ರಿಸರ್ಚ್ ಇನಸ್ಟಿಟ್ಯೂಟ’ನ್ನು ಪಡೆಯಲು ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಇದು ನೈಜ ರೂಪಕ್ಕೆ ಬರಲು ಎಷ್ಟು ವರ್ಷ ಕಾಯಬೇಕೋ ಏನೋ ಎಂದು ಇಲಾಖೆ ಅಧಿಕಾರಿಗಳು ಗೊಣಗುತ್ತಿದ್ದಾರೆ.

ಮೀನುಗಾರಿಕಾ ಇಲಾಖೆ ಎಣಿಕೆದಾರರಿಗೆ ಸಂಬಳ ನಿಲ್ಲಿಸಿದ ಪರಿಣಾಮ ಅಂಕಿಅಂಶಗಳ ಸಂಗ್ರಹ ನಿಂತಿದ್ದು, ಇದರಿಂದ ಇಲಾಖೆ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಬಹುದು.

“ನಾನು ಮತ್ತು ಇತರ ಕಡಲ ರಾಜ್ಯದ ಮೀನುಗಾರಿಕಾ ಸಚಿವರುಗಳು ಕೇಂದ್ರ ಸರ್ಕಾರದ ನೆರವನ್ನು ಯಾಚಿಸಿದ್ದೇವೆ. ಅಲ್ಲಿಯವರೆಗೆ ಇಲಾಖೆ ಕೆಲಸಕಾರ್ಯಗಳನ್ನು ಚಾಲನೆಯಲ್ಲಿಡಲು ಇಲಾಖೆಗಳಿಗೆ ತಿಳಿಸುತ್ತೇನೆ” ಎಂದು ರಾಜ್ಯ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.