ದ್ವಿಚಕ್ರ ವಾಹನ ಸವಾರರಿಗೆ ಮೀನು ಸಾಗಾಟ ವಾಹನಗಳಿಂದ ಅಪಾಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಬಂದರಿನಿಂದ ಹಸಿ ಮೀನು ಹೇರಿಕೊಂಡು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಾಗುವ ಮೀನು ಲಾರಿಯಿಂದ ಚೆಲ್ಲುವ ತ್ಯಾಜ್ಯ ನೀರು ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ.. ಅಲ್ಲದೆ ಪರಿಸರದಲ್ಲೆಲ್ಲ ದುರ್ನಾತ ಬೀರುತ್ತಿದೆ. ಹೆದ್ದಾರಿಗಳಲ್ಲಿ ನೀರು ಹರಿಸುತ್ತಾ ಸಾಗುವ ವಾಹನಗಳಿಂದ ಚೆಲ್ಲಿದ ಎಣ್ಣೆಮಿಶ್ರಿತ ನೀರು ವಿಪರೀತ ಜಾರುತ್ತಿದ್ದು, ಇದರ ಮೇಲೆ ಚಲಿಸುವ ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪಿದ ಘಟನೆಗಳೂ ನಡೆದಿದೆ.

ಮಂಗಳೂರು-ಕಾರವಾರ, ಮಂಗಳೂರು-ಉಳ್ಳಾಲ ರಸ್ತೆ ಸೇರಿದಂತೆ ಮಂಗಳೂರು ಬಂದರಿನಿಂದ ಹೊರಡುವ ಬಹುತೇಕ ರಸ್ತೆಗಳಲ್ಲಿ ಹಸಿಮೀನಿನ ತ್ಯಾಜ್ಯದ ನೀರು ರಸ್ತೆಗಳಲ್ಲೇ ಹರಿದಾಡುತ್ತಿದೆ. ಮೀನುಗಳನ್ನು ಐಸ್ ಹಾಕಿ ಭಾರೀ ಲಾರಿಗಳಲ್ಲಿ ಕೊಂಡು ಹೋಗಲಾಗುತ್ತಿದೆ. ಆದರೆ ಈ ಸಂದರ್ಭದಲ್ಲಿ ತ್ಯಾಜ್ಯ ನೀರು ಹೊರಚೆಲ್ಲದಂತೆ ಯಾವುದೇ ಮುಂಜಾಗ್ರತೆ ಅನುಸರಿಸುತ್ತಿಲ್ಲ. ಈ ವಾಹನ ರಸ್ತೆ ಪಕ್ಕದಲ್ಲಿ ನಿಂತಾಗ ಅಲ್ಲಿ ಹರಿಯುವ ನೀರು ಶೇಖರಣೆಗೊಂಡು ಪರಿಸರ ದುರ್ನಾತಕ್ಕೂ ಕಾರಣವಾಗುತ್ತಿದೆ.

ನಗರದ ಬಹುತೇಕ ರಸ್ತೆಗಳು ಇದೀಗ ಕಾಂಕ್ರೀಟ್ ರಸ್ತೆಗಳಾಗಿದ್ದು, ವಾಹನಗಳು ಅತೀ ವೇಗದಿಂದ ಸಂಚರಿಸುತ್ತಿವೆ. ಲಾರಿ ಲಾರಿಗಳಿಂದ ಚೆಲ್ಲುವ ನೀರು ಪಾದಚಾರಿಗಳ ಮೈಗೆ ಸಿಂಚನವಾಗಿ ಆಕ್ರೋಶಕ್ಕೂ ಕಾರಣವಾಗುವುದಿದೆ.

“ರಸ್ತೆಗಳಲ್ಲಿ ಚೆಲ್ಲುತ್ತಾ ಸಾಗುವ ತ್ಯಾಜ್ಯ ನೀರಿನಿಂದಾಗಿ ಹೆಚ್ಚು ಅಪಾಯಕ್ಕಿಡಾಗುವುದು ಬೈಕ್ ಸವಾರರು. ಎಣ್ಣೆಮಿಶ್ರಿತ ಈ ನೀರಿನ ಮೇಲೆ ಬೈಕ್ ವಿಪರೀತವಾಗಿ ಜಾರುತ್ತದೆ. ಇದು ಸಾವಿಗೂ ಕಾರಣವಾಗುತ್ತದೆ” ಎನ್ನುತ್ತಾರೆ ಡಿ ವೈ ಎಫ್ ಐ ಮುಖಂಡರಾದ ಬಿ ಕೆ ಇಮ್ತಿಯಾಝ್.

“ಈ ರಸ್ತೆಗಳಲ್ಲಿ ಮೀನು ಸಾಗಾಟವಾಗುತ್ತದೆ ಎಂದು ಚೆಲ್ಲುವ ತ್ಯಾಜ್ಯ ನೀರನ್ನು ಕಂಡು ಸುಲಭವಾಗಿ ಹೇಳಬಹುದು. ಯಾಕೆಂದರೆ ರಸ್ತೆಯಲ್ಲಿ ಹೋಗುವ ವೇಳೆ ಚಾಲಕರು ವಾಹನಕ್ಕೆ ಅಳವಡಿಸಿದ ತ್ಯಾಜ್ಯ ಸಂಗ್ರಹದ ಟ್ಯಾಂಕಿಯ ನಳ್ಳಿಯನ್ನು ತೆರೆದಿಟ್ಟು ಹರಿದು ಹೋಗುವಂತೆ ಮಾಡುತ್ತಾರೆ. ಇನ್ನು ಕೆಲವು ವಾಹನಗಳಿಗೆ ಟ್ಯಾಂಕಿಯೇ ಇಲ್ಲ. ಆದರೆ ಹೆಚ್ಚಿನ ಚಾಲಕರು ನಳ್ಳಿಯನ್ನು ತೆರೆದಿಟ್ಟೇ ಓಡಿಸುತ್ತಿದ್ದಾರೆ. ಇದು ರಸ್ತೆಯುದ್ದಕ್ಕೂ ನೀರು ಚೆಲ್ಲಲು ಕಾರಣವಾಗುತ್ತದೆ” ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರೊಬ್ಬರು.

“ದುರ್ನಾತದ ಈ ನೀರನ್ನು ರಸ್ತೆ ಮೇಲೆ ಚೆಲ್ಲುವುದು ತಪ್ಪು. ಆದರೆ ಈ ನೀರನ್ನು ಚೆಲ್ಲುವುದಕ್ಕೆ ನಗರ ವ್ಯಾಪ್ತಿಯೊಳಗೆ ಸರಿಯಾದ ಜಾಗ ಇಲ್ಲ. ಸಂಬಂಧ ಪಟ್ಟ ಇಲಾಖೆ ಸೂಕ್ತ ಜಾಗ ಗುರುತಿಸಿ ನಮಗೆ ನೀರು ಚೆಲ್ಲುವುದಕ್ಕೆ ಅವಕಾಶ ಮಾಡಿಕೊಡಬೇಕು. ನಗರ ವ್ಯಾಪ್ತಿಯಲ್ಲಿ ಹಲವು ಚಿಕ್ಕ ಟೆಂಪೋಗಳಲ್ಲಿ ಮೀನು ಸಾಗಾಟ ಮಾಡಲಾಗುತ್ತಿದೆ. ಆದರೆ ಎಲ್ಲೂ ಕೂಡಾ ನೀರು ಚೆಲ್ಲುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಇಲ್ಲ. ಹಲವು ವಾಹನಗಳು ನೀರು ಸಂಗ್ರಹಿಸಲು ಟ್ಯಾಂಕಿನ ವ್ಯವಸ್ಥೆ ಮಾಡಿಕೊಂಡಿವೆ. ಪೊಲೀಸರು ನಮಗೆ ಸೂಚಿಸಿದ ನಿಯಮಗಳನ್ನು ಪಾಲಿಸಿ ನಾವು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುತ್ತಿದ್ದೇವೆ” ಎನ್ನುತ್ತಾರೆ ಮೀನು ಸಾಗಾಟಗಾರ ಅಹಮ್ಮದ್ ಬಾವ.

ಸಾರ್ವಜನಿಕರಿಂದ ಇಂತಹ ಮೀನು ಸಾಗಾಟ ವಾಹನಗಳ ವಿರುದ್ಧ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಮೀನು ಸಾಗಾಟಗಾರರ ಸಭೆಯೊಂದನ್ನು ಡಿಸಿಪಿ ಶಾಂತರಾಜು ಕರೆದಿದ್ದರು. ಈ ವೇಳೆ ಕೆಲವು ನಿಯಮಗಳನ್ನು ಪಾಲಿಸುವಂತೆ ಮೀನು ಸಾಗಾಟಗಾರರಿಗೆ ಸೂಚಿಸಲಾಗಿತ್ತು.