ಮೀನು ಮಾರಾಟ ಫೆಡ್ರೇಶನ್ ಡೀಸೆಲ್ ಬಂಕ್ ಅವ್ಯವಹಾರ ತನಿಖೆ ಸಿಐಡಿಗೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೇಡರೇಶನ್ ಅಧ್ಯಕ್ಷ ಕಮ್ ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಆಡಳಿತ ಮಂಡಳಿಗೆ ಸೇರಿದ ಮಲ್ಪೆ ಡೀಸೆಲ್ ಬಂಕ್ ಸೇರಿದಂತೆ ನಾಲ್ಕು ಬಂಕುಗಳಲ್ಲಿ ನಡೆದಿರುವ ಅವ್ಯವಹಾರದ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರಕಾರ ಆದೇಶಿಸಿದೆ. ಸಹಕಾರಿ ಮೀನು ಮಾರಾಟ ಮಹಾಮಂಡಳಿ ಅಧೀನದ ಮಲ್ಪೆ, ಗಂಗೊಳ್ಳಿ, ಪಡುಬಿದ್ರೆ ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಡೀಸೆಲ್ ಬಂಕುಗಳಲ್ಲಿ ಡೀಸೆಲ್ ವಿತರಣೆಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಮೀನುಗಾರಿಕಾ ಇಲಾಖೆಯ ಮಲ್ಪೆ ಮತ್ತು ಗಂಗೊಳ್ಳಿಯ ಜಂಟಿ ನಿರ್ದೇಶಕರುಗಳು ನಡೆಸಿದ ಪರಿಶೀಲನೆಯ ವೇಳೆ ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯ ಮಲ್ಪೆ, ಗಂಗೊಳ್ಳಿ, ಪಡುಬಿದ್ರೆ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಇದೀಗ ಈ ಎಲ್ಲಾ ಪ್ರಕರಣಗಳ ತನಿಖೆಯನ್ನು ರಾಜ್ಯ ಸರಕಾರವು ಸಿಐಡಿಗೆ ವಹಿಸಿ ಆದೇಶಿಸಿದೆ.

ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ವರದಿಯನ್ನು ನ್ಯಾಯಾಲಯಕ್ಕೆ ತ್ವರಿತವಾಗಿ ಸಲ್ಲಿಸಬೇಕು ಹಾಗೂ ಈ ಬಗ್ಗೆ ಸರಕಾರಕ್ಕೆ ವರದಿ ನೀಡುವಂತೆ ಸಿಐಡಿಗೆ ಸೂಚಿಸಲಾಗಿದೆ. ತನಿಖೆಗೆ ಸಂಬಂಧಿಸಿ ಸಿಐಡಿ ತಂಡಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಉಡುಪಿ ಜಿಲ್ಲಾ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೂ ಸರಕಾರ ಆದೇಶಿಸಿದೆ.

LEAVE A REPLY