ಎಲ್ಲೆಂದರಲ್ಲಿ ಮೀನು ನೀರು ತ್ಯಾಜ್ಯ ವಿಸರ್ಜನೆ

ಪಣಂಬೂರಿನಲ್ಲಿ ಲಾರಿ ಚಾಲಕರಿಂದ ಸಮಸ್ಯೆ ಸೃಷ್ಟಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೊರವಲಯದಾದ್ಯಂತ ಹೆದ್ದಾರಿ ಪಕ್ಕದಲ್ಲಿ ಲಾರಿಗಳಲ್ಲಿ ಮೀನು ನೀರು ತ್ಯಾಜ್ಯವನ್ನು ಚೆಲ್ಲಿಕೊಂಡು ಸಾಗುತ್ತಿರುವುದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕುವುದಕ್ಕೆ ಪೊಲೀಸರಿಗೆ ಇನ್ನು ಸಾಧ್ಯವಾಗಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಮಂಗಳೂರು ಪೊಲೀಸರು ಮೀನು ಹೇರಿಕೊಂಡು ಹೋಗುವ ಲಾರಿಗಳ ಚಾಲಕ, ಮಾಲಕರನ್ನು, ಮೀನು ಮಾರಾಟಗಾರರನ್ನು ಕರೆಸಿ ಸಭೆಯನ್ನೂ ನಡೆಸಿ ಮೀನು ನೀರನ್ನು ಎಲ್ಲೆಂದರಲ್ಲಿ ಚೆಲ್ಲುವುದರ ವಿರುದ್ಧ ಎಚ್ಚರಿಕೆ ನೀಡಿದ್ದರು.

ಪಣಂಬೂರು ಎನ್ ಎಂ ಪಿ ಟಿ ಗೇಟ್ ಮುಂಭಾಗ ಮಂಗಳೂರಿನಿಂದ ಉಡುಪಿಗೆ ಸಾಗುವ ರಸ್ತೆ ಬದಿಯಲ್ಲಿ ಈ ರೀತಿ ಚೆಲ್ಲುತ್ತಿರುವ ಮೀನು ತ್ಯಾಜ್ಯ ನೀರಿನ ಹೊಂಡವೇ ನಿರ್ಮಾಣವಾಗಿದ್ದು, ಪರಿಸರವಿಡೀ ದುರ್ನಾತ ಬೀರುತ್ತಿದೆ. ಜೊತೆಗೆ ಲಾರಿ ಚಾಲಕರು ಇಲ್ಲಿ ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣರಾಗುತ್ತಿದ್ದಾರೆ.

ಕೇರಳ ಮತ್ತು ಗೋವಾ ಗಡಿ ಪ್ರವೇಶಿಸಿದರೆ ಈ ರೀತಿಯಾಗಿ ಮೀನು ನೀರು ತ್ಯಾಜ್ಯವನ್ನು ಚೆಲ್ಲುವಂತಿಲ್ಲ. ಹಾಗಾಗಿ ಕರ್ನಾಟಕದ ಭಾಗದಲ್ಲಿ ರಸ್ತೆ ಪಕ್ಕದಲ್ಲೇ ಗಾಡಿ ನಿಲ್ಲಿಸಿ ತ್ಯಾಜ್ಯ ನೀರನ್ನು ಹೊರಚೆಲ್ಲಲಾಗುತ್ತಿದೆ. ಲಾರಿಗಳಲ್ಲಿ ತುಂಬಿಸಲಾದ ಮಂಜುಗಡ್ಡೆ ನೀರಾಗದಂತೆ ವಾಹನದ ಕೆಳಭಾಗದಲ್ಲಿ ಅಳವಡಿಸಲಾದ ಕ್ಯಾನಿಗೆ ಬೀಳುತ್ತದೆ. ಇದು ತುಂಬಿದ ಬಳಿಕ ರಸ್ತೆಯುದ್ದಕ್ಕೂ ಚೆಲ್ಲತೊಡಗುತ್ತದೆ. ಇನ್ನೂ ಕೂಡಾ ಹೆದ್ದಾರಿ ಪಕ್ಕದಲ್ಲಿ ಎಲ್ಲೂ ಕೂಡಾ ಮೀನು ನೀರು ತ್ಯಾಜ್ಯವನ್ನು ತುಂಬಿಸಲೆಂದು ಪ್ರತ್ಯೇಕ ತೊಟ್ಟಿಗಳಿಲ್ಲ. ಈ ಕಾರಣಕ್ಕೆ ಲಾರಿ ಚಾಲಕರು ಕೂಡಾ ಎಲ್ಲೆಂದರಲ್ಲಿ ಈ ನೀರನ್ನು ಹೊರಚೆಲ್ಲುತ್ತಿದ್ದಾರೆ.

ದಿನಕ್ಕೆ ನೂರಕ್ಕೂ ಅಧಿಕ ಮೀನು ಹೊತ್ತ ಲಾರಿಗಳು ಹೆದ್ದಾರಿ 66ರಲ್ಲಿ ಮಂಗಳೂರಿನಿಂದ ಕಾರವಾರ, ಗೋವಾಕ್ಕೆ ಸಂಚರಿಸುತ್ತವೆ. ಪ್ರವಾಸೋದ್ಯಮ ರಾಜ್ಯಗಳಾದ ಗೋವಾ, ಕೇರಳದಲ್ಲಿ ಪರಿಸರವನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಮತ್ತು ಪ್ರವಾಸಿಗರಿಗೆ ಕಿರಿಕಿರಿ ಆಗಬಾರದೆಂದು ಈ ತ್ಯಾಜ್ಯದ ನೀರನ್ನು ಚೆಲ್ಲದಂತೆ ಕಟ್ಟುನಿಟ್ಟಿನ ನಿರ್ಬಂಧವಿದೆ. ಆದಕಾರಣ, ಈ ರಾಜ್ಯವನ್ನು ಪ್ರವೇಶಿಸುವ ಮುನ್ನ ಚಾಲಕರು ತ್ಯಾಜ್ಯವನ್ನು ಇಲ್ಲೇ ಚೆಲ್ಲುತ್ತಾರೆ. ಇದು ದುರ್ನಾತದ ಜೊತೆಗೆ ಮಾಲಿನ್ಯಕ್ಕೂ ಕಾರಣವಾಗುತ್ತದೆ. ವಿವಿಧ ಸಂಘಟನೆಗಳು ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಪೊಲೀಸ್ ಇಲಾಖೆ ದಂಡ ವಿಧಿಸುತ್ತಿದ್ದರೂ ಪ್ರಯೋಜನವಾಗಿಲ್ಲ.

ಬೈಕಂಪಾಡಿ ಆಸುಪಾಸಿನಲ್ಲಂತೂ ಇದೀಗ ಸಾರ್ವಜನಿಕರಿಗೆ, ದ್ವಿಚಕ್ರವಾಹನ ಸವಾರರಿಗೆ ಪರಿಸರದ ದುರ್ನಾತವನ್ನು ತಡೆದುಕೊಳ್ಳಲಾಗುತ್ತಿಲ್ಲ. ಕೂಳೂರಿನಿಂದ ಬೈಕಂಪಾಡಿಯವರೆಗೆ ಶುದ್ಧ ವಾಯು ವಲಯ ಎನ್ನೂವುದೂ ಇಲ್ಲ. ಇದು ದುರ್ವಾಸನೆ ವಲಯವಾಗಿದೆ. ದೂರದೂರಿಗೆ ತೆರಳುವ ಲಾರಿ ಚಾಲಕರು ಶೌಚವನ್ನೂ ಮಾರ್ಗದ ಪಕ್ಕದಲ್ಲೇ ಮಾಡಿ ಅನೈರ್ಮಲ್ಯಕ್ಕೆ ಕಾರಣವಾಗುತ್ತಿದ್ದಾರೆ. ಇಂತಹ ಲಾರಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.