ಹೆದ್ದಾರಿಯಲ್ಲಿ ಮೀನಿನ ತ್ಯಾಜ್ಯ ನೀರು ರಸ್ತೆಗೆ ಚೆಲ್ಲುವ ಲಾರಿಗಳ ಹಾವಳಿಗೆ ಇನ್ನು ಕ್ರಮವಿಲ್ಲ !

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅಂತಾರಾಜ್ಯಗಳಿಗೆ ಮೀನು ಹೇರಿಕೊಂಡು ಸಾಗುವ ಲಾರಿಗಳಿಂದ ಹೊರಸೂಸುವ ತ್ಯಾಜ್ಯ ನೀರಿನಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿತ್ಯ ದುರ್ನಾತ ಹೇಳತೀರದು. ಗೋವಾ ಅಥವಾ ಕೇರಳದಿಂದ ಪ್ರವೇಶಿಸಿದವರಿಗೆ ಈ ಅನುಭವವಾಗದೆ ಇರಲಿಕ್ಕಿಲ್ಲ.

ಮೀನು ಸಾಗಾಟದ ಲಾರಿಗಳಲ್ಲಿ ತುಂಬಿಸಲಾದ ಐಸ್ ನೀರಾದಂತೆ ಟ್ರಕ್ಕುಗಳಿಂದ ದುರ್ನಾತ ಬೀರುವ ನೀರು ರಸ್ತೆಗೆ ಚೆಲ್ಲುತ್ತ ಹೋಗುತ್ತದೆ. ಬಹುತೇಕ ಲಾರಿಗಳಲ್ಲಿ ಈಗಲೂ ಈ ನೀರು ಸಂಗ್ರಹಿಸಿ, ಸೂಕ್ತ ಜಾಗದಲ್ಲಿ ಚೆಲ್ಲುವ ಟ್ಯಾಂಕ್ ವ್ಯವಸ್ಥೆ ಇಲ್ಲ.

ದಿನಕ್ಕೆ ನೂರಾರು ಮೀನು ಹೊತ್ತ ಲಾರಿಗಳು ಎನ್ ಎಚ್ 66ರಲ್ಲಿ ಗೋವಾ ಮತ್ತು ಮಂಗಳೂರು ಹಾಗೂ ಕೇರಳಕ್ಕೂ ಓಡಾಡುತ್ತವೆ.

ಗೋವಾ ಮತ್ತು ಕೇರಳ ಪ್ರವಾಸೋದ್ಯಮ ರಾಜ್ಯಗಳೆಂದು ಪರಿಗಣಿಸಲ್ಪಟ್ಟಿದ್ದು, ಅಲ್ಲಿ ಮೀನಿನ ಲಾರಿಗಳಿಂದ ತ್ಯಾಜ್ಯ ನೀರು ಹೊರಸೂಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಕರ್ನಾಟಕದಲ್ಲಿ ಇಂತಹ ನಿಯಮ ಇನ್ನೂ ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ.

ಕಾರಣ, ಕರ್ನಾಟಕದ ರಸ್ತೆಗಳಲ್ಲಿ ಸಾಗುವಾಗ ಮೀನು ಹೊತ್ತ ಲಾರಿಗಳ ಚಾಲಕರು ತ್ಯಾಜ್ಯ ನೀರು ಸಂಗ್ರಹದ ಟ್ಯಾಂಕ್ ತೆರೆದಿಟ್ಟು, ರಸ್ತೆಗೆ ನೀರು ಚೆಲ್ಲುತ್ತಾ ಹೋಗುತ್ತಾರೆ. ಇದರ ವಾಸನೆ ಹೇಳತೀರದು ಎಂಬುದು ವಾಹನಿಗರ ದೂರಾಗಿದೆ. ಗೋವಾ ಅಥವಾ ಕೇರಳ ಪ್ರವೇಶಿಸುವ ಇಂತಹ ವಾಹನಗಳು ಮುಂಚೆಯೇ ತ್ಯಾಜ್ಯ ನೀರು ಖಾಲಿ ಮಾಡಿಕೊಳ್ಳುತ್ತವೆ.

ಮೀನಿನ ತ್ಯಾಜ್ಯ ನೀರು ರಸ್ತೆಗೆ ಚೆಲ್ಲುತ್ತಿರುವ ಲಾರಿಗಳ ವಿರುದ್ಧ ಮೊಗರು ನಿವಾಸಿಯೊಬ್ಬರು ಪೊಲೀಸ್ ಮತ್ತು ಸಾರಿಗೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಈ ತ್ಯಾಜ್ಯ ನೀರಿಂದ ವಾಯು ಮಾಲಿನ್ಯವಲ್ಲದೆ, ದ್ವಿಚಕ್ರ ವಾಹನಗಳ ಸಹಿತ ಇತರ ಲಘು ವಾಹಗಳ ಅಪಫಾತಗಳಿಗೂ ಕಾರಣವಾಗಿದೆ ಎಂದವರು ದೂರಿದ್ದಾರೆ.

ಮೀನು ತ್ಯಾಜ್ಯ ನೀರು ರಸ್ತೆಗೆ ಚೆಲ್ಲುವ ಲಾರಿಗಳ ಹಾವಳಿ ವಿರುದ್ಧ ತುಳುನಾಡ ರಕ್ಷಣಾ ವೇದಿಕೆಯೂ ಕೆಲವು ಬಾರಿ ಪ್ರತಿಭಟನೆ ನಡೆಸಿದೆ. ದೂರಿನನ್ವಯ ಮಂಗಳೂರು ಸಿಟಿ ಪೊಲೀಸರು ಲಾರಿಗಳ ವಿರುದ್ಧ ಕೆಲವು ಬಾರಿ ಕ್ರಮ ಜರುಗಿಸಿದ್ದುಂಟು. ಆದರೆ ಕೆಲವು ದಿನಗಳ ಬಳಿಕ ಈ ದುಃಸ್ಥಿತಿ ಯಥಾಪ್ರಕಾರ ಮುಂದುವರಿಯುತ್ತಿದೆ ಎಂದು ದೂರಲಾಗಿದೆ.

ಮೀನಿನ ತ್ಯಾಜ್ಯ ನೀರು ರಸ್ತೆಗೆ ಚೆಲ್ಲುತ್ತ ಹೋಗುವ ಲಾರಿಗಳ ವಿರುದ್ಧ ಕ್ರಮ ಜರುಗಿಸಲು ತಾನು ಮೂರು ಜಿಲ್ಲೆಗಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆಂದು ಉಸ್ತುವಾರಿ ಸಾರಿಗೆ ಆಯುಕ್ತ ಎಂ ಕೆ ಅಯ್ಯಪ್ಪ ತಿಳಿಸಿದರು.