ನಿಂತಿದ್ದ 2 ಲಾರಿಗೆ ಮೀನಿನ ಲಾರಿ ಡಿಕ್ಕಿ : ಇಬ್ಬರು ಆಸ್ಪತ್ರೆಗೆ

ಅಪಘಾತಕ್ಕೀಡಾದ ಲಾರಿ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಹೆದ್ದಾರಿ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ಸರಕು ತುಂಬಿದ ಲಾರಿಗಳಿಗೆ ಮೀನಿನ ಲಾರಿಯೊಂದು ಡಿಕ್ಕಿಯಾದ ಘಟನೆ ಬೈಂದೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಎರಡೂ ಲಾರಿಗಳಿಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂರೂ ಲಾರಿಗಳ ಮುಂಭಾಗ ನುಜ್ಜುಗುಜ್ಜಾಗಿದೆ.

ಘಟನೆಯಲ್ಲಿ ಲಾರಿ ಚಾಲಕರಾದ ಸಮ್ಮಿ ಡಯಾಸ್ ಹಾಗೂ ಗಣೇಶ್ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಲಾರಿಗಳನ್ನೂ ರಸ್ತೆಯ ಬದಿಯಲ್ಲಿಯೇ ನಿಲ್ಲಿಸಲಾಗುತ್ತಿದೆ. ಇದರಿಂದ ಕರಾವಳಿಯಲ್ಲಿ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುವ ಆರೋಪಗಳು ಈಗ ಕೇಳಿ ಬರುತ್ತಿದೆ.