ನಗರದ ಉತ್ಸಾಹಿ ಟೆಕ್ಕಿಗಳ ಸಾರಥ್ಯದಲ್ಲಿ `ಫಿಶ್ ಗ್ಯಾರೇಜ್’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬಹುರಾಷ್ಟ್ರೀಯ ಕಂಪೆನಿಯೊಂದಕ್ಕೆ ಕೆಲಸ ಮಾಡುವ ಐದು ಮಂದಿ ಸಾಫ್ಟವೇರ್ ಇಂಜಿನಿಯರುಗಳು ನಗರದ ಉರ್ವ ಚಿಲಿಂಬಿಯಲ್ಲಿ “ಫಿಶ್ ಗ್ಯಾರೇಜ್” ಎಂಬ ವಿನೂತನ ಕರಾವಳಿಯ ಮೀನು ಖಾದ್ಯಗಳನ್ನು ಗ್ರಾಹಕರಿಗೆ ಉಣಬಡಿಸುವ ಹೋಟೆಲ್ ಒಂದನ್ನು ಆರಂಭಿಸಿದ್ದಾರೆ. ಸ್ವಾದಿಷ್ಟ ಹಾಗೂ ರುಚಿಕರ ಮೀನಿನ ಖಾದ್ಯಗಳನ್ನು ತಯಾರಿಸುವಲ್ಲಿ ಅವರಿಗಿರುವ ಆಸಕ್ತಿಯೇ ಈ ರೆಸ್ಟಾರೆಂಟ್ ಆರಂಭಿಸಲು ಪ್ರೇರಣೆಯಾಗಿದೆ. ವಿಘ್ನೇಶ್ ಕಿಣಿ, ಸಚಿನ್ ಪಿ ಆರ್, ಸಚಿನ್ ಪೂಜಾರಿ, ಹೇಮಂತ್ ಕರ್ಕೇರಾ ಹಾಗೂ ಶಿಶಿರ್ ಸಾಮನಿ ಎಂಬ ಹೆಸರಿನ ಈ ಯುವಕರು ಥಾಮ್ಸನ್ ಎಂಡ್ ರೂಟರ್ಸ್ ಸಂಸ್ಥೆಯ ಉದ್ಯೋಗಿಗಳಾಗಿದ್ದು, ಎಲ್ಲರೂ ತಮ್ಮ ಬಿಡುವಿನ ವೇಳೆಯಲ್ಲಿ ಫಿಶ್ ಗ್ಯಾರೇಜಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ತಾವೆಲ್ಲರೂ ಒಟ್ಟಿಗೆ ವಾಸವಾಗಿದ್ದಾಗ ಸ್ವತಃ ಅಡುಗೆ ಮಾಡುವ ಅನಿವಾರ್ಯತೆಯಿತ್ತು. ಆಗ ವಿವಿಧ ಖಾದ್ಯಗಳನ್ನು ತಯಾರಿಸುವಲ್ಲಿ ಉಂಟಾದ ಆಸಕ್ತಿ ಕೊನೆಗೆ ಹೋಟೆಲ್ ಒಂದನ್ನು ಸ್ಥಾಪಿಸಲು ಪ್ರೇರಣೆಯಾಯಿತು ಎಂದು ಈ ಯುವಕರು ಹೇಳುತ್ತಾರೆ.

ಫಿಶ್ ಗ್ಯಾರೇಜ್ ಮೆನುವಿನಲ್ಲಿ ಸೀಮಿತ ಖಾದ್ಯಗಳಿದ್ದರೂ ಎಲ್ಲವೂ ರುಚಿಕರ. ಜಿಎಸ್ಬಿ ಸಮುದಾಯದ ಕೆಲ ವಿಶೇಷ ಖಾದ್ಯಗಳೂ ಮೆನುವಿನಲ್ಲಿವೆ. ಎಲ್ಲಾ ಮಸಾಲೆಗಳನ್ನು ಈ ಉತ್ಸಾಹಿ ಯುವಕರ ಮುತುವರ್ಜಿಯಿಂದರೇ ಅರೆದು ಸಿದ್ಧಪಡಿಸಲಾಗುತ್ತದೆ.

ಕೆಲವೊಂದು ಉದ್ಯೋಗಿಗಳಿಗೆ ಎಂಟು ತಿಂಗಳು ತರಬೇತಿ ನೀಡಿ ಫಿಶ್ ಗ್ಯಾರೇಜಿನ ಗ್ರಾಹಕರ ಸೇವೆಗೆ ಅವರನ್ನು ಸಜ್ಜುಗೊಳಿಸಲಾಗಿದೆ ಎಂದು ಕಿಣಿ ಹೇಳುತ್ತಾರಲ್ಲದೆ ತಾವು ಐದು ಮಂದಿಯಲ್ಲಿ ಯಾರೂ ಹೊಟೇಲಿನಲ್ಲಿಲ್ಲದೇ ಇದ್ದಾಗ ಈ ಉದ್ಯೋಗಿಗಳೇ ಎಲ್ಲವನ್ನೂ ನಿಭಾಯಿಸುತ್ತಾರೆ. ಆದರೆ ಪ್ರತಿ ಖಾದ್ಯಕ್ಕೂ ತಮ್ಮ ಮುತುವರ್ಜಿಯಲ್ಲಿಯೇ ತಯಾರಿಸಲಾದ ಮಸಾಲೆಗಳನ್ನು ಮಾತ್ರ ಉಪಯೋಗಿಸಲಾಗುತ್ತದೆ ಎಂದು ಅವರು ವಿವರಿಸುತ್ತಾರೆ.

ಅಂದ ಹಾಗೆ ಈ ಹೋಟೆಲಿನ ಸ್ಥಳದಲ್ಲಿ ಹಿಂದೆ ಒಂದು ಗ್ಯಾರೇಜ್ ಇತ್ತು. ಅದಕ್ಕೆಂದೇ ಇದನ್ನು ಫಿಶ್ ಗ್ಯಾರೇಜ್ ಎಂದು ಹೆಸರಿಸಲಾಗಿದೆ. 350 ಚದರ ಅಡಿ ವಿಸ್ತೀರ್ಣದ ಈ ಫಿಶ್ ಗ್ಯಾರೇಜಿನಲ್ಲಿ ಒಮ್ಮೆಗೆ 24 ಮಂದಿ ಕುಳಿತು ಊಟ ಮಾಡಬಹುದಾಗಿದೆ.

 

LEAVE A REPLY