ಎತ್ತಿನಹೊಳೆ ಪ್ರಾಜೆಕ್ಟಿನಿಂದ ಸಮುದ್ರ ಮೀನು ಸಂತಾನೋತ್ಪತ್ತಿ ಕುಂಠಿತವಾಗಲಿದೆ : ತಜ್ಞರು

ಮಂಗಳೂರು : ಮೀನುಗಳ ಸಂತಾನೋತ್ಪತ್ತಿಗೆ ಸಮುದ್ರದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಪೌಷ್ಟಿಕ ಸೊತ್ತು ಮತ್ತು ಆಮ್ಲಜನಕದ ಅವಶ್ಯಕತೆ ಇದೆ. ಆದರೆ ಇದರ ಕೊರತೆಯಾದಲ್ಲಿ ಮೀನುಗಳು ವಲಸೆ ಹೋಗುತ್ತವೆ ಎಂದು ಬೀದರದ ಕರ್ನಾಟಕ ಪಶು, ಪ್ರಾಣಿ ಮತ್ತು ಮೀನು ವಿಜ್ಞಾನಗಳ ಯೂನಿವರ್ಸಿಟಿ ಅಭಿಪ್ರಾಯಪಟ್ಟಿದೆ.

“ಸಮುದ್ರ ನೀರಿನಲ್ಲಿ ನಿರ್ದಿಷ್ಟ ಪ್ರಮಾಣದ ಲವಣಾಂಶ, ಆಮ್ಲಜನಕ ಮತ್ತು ಪೌಷ್ಠಿಕ ಸೊತ್ತು ಒಳಗೊಂಡಿರಬೇಕಾಗುತ್ತದೆ. ಇದರಿಂದ ಮೀನುಗಳ ಸಂತಾನೋತ್ಪತ್ತಿಗೆ ಸಲೀಸಾಗಿ ನಡೆಯುತ್ತದೆ. ವಿವಿಧ ನದಿಗಳಿಂದ ಸಮುದ್ರಕ್ಕೆ ನೀರು ಹರಿದಾಗಲೇ ಸಮುದ್ರ ನೀರಿನಲ್ಲಿ ಅಗತ್ಯ ಸೊತ್ತುಗಳು ಹಿತಮಿತವಾಗಿರುತ್ತವೆ” ಎಂದು ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಎಸ್ ಎಂ ಶಿವಪ್ರಕಾಶ್ ತಿಳಿಸಿದರು.

“ಈ ಎಲ್ಲ ಪೌಷ್ಠಿಕ ಆಹಾರಗಳು ಸಮುದ್ರದ ಮೀನುಗಳಿಗೆ ಅಗತ್ಯ ಕಾಲದಲ್ಲಿ ಲಭ್ಯವಾದಾಗ ಸಂತಾನೋತ್ಪತ್ತಿ ಸುಲಭವಾಗುತ್ತದೆ. ಅಂದರೆ, ಮೀನುಗಳು ಲೋಡುಗಟ್ಟಲೆ ತತ್ತಿ ಇಡುತ್ತವೆ. ಸಮುದ್ರದಲ್ಲಿ ಈ ದೃಶ್ಯ ಮಳೆಗಾಲದಲ್ಲಿ ಮಾತ್ರ ಕಾಣಬಹುದಾಗಿದೆ. ಆಗ ನದಿಗಳಿಂದ ಸಾಕಷ್ಟು ಪ್ರಮಾಣದಲ್ಲಿ ನದಿ ನೀರು ಸಮುದ್ರ ಸೇರುತ್ತದೆ” ಎಂದವರು ವಿವರಿಸಿದರು.

“ಎತ್ತಿನಹೊಳೆ ಯೋಜನೆ ಕಾರ್ಯಗತವಾದಲ್ಲಿ ಮಳೆಗಾಲದಲ್ಲಿ ಎಷ್ಟು ಪ್ರಮಾಣದಲ್ಲಿ ನದಿ ನೀರು ಸಮುದ್ರಕ್ಕೆ ಹರಿಯುವುದು ತಡೆಯಲ್ಪಡುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಅರಬ್ಬಿ ಸಮುದ್ರಕ್ಕೆ ಕಾಳಿ, ಶರಾವತಿ ಮತ್ತು ನೇತ್ರಾವತಿಯಂತಹ 18 ಬೃಹತ್ ನದಿಗಳಿಂದ ಪರಿಶುದ್ಧ ನೀರು ಹರಿಸುತ್ತದೆ. ಎತ್ತಿನಹೊಳೆ ಯೋಜನೆಯಿಂದ ಈ ಎಲ್ಲ ನದಿಗಳ ನೀರು ತಡೆಹಿಡಿಯಲ್ಪಟ್ಟರೆ ಮೀನು ಸಂತತಿ ಕಷ್ಟವಾಗಲಿದೆ” ಎಂದವರು ಹೇಳಿದರು.