ಮಣಪ್ಪುರಂ ಶಿವ ದೇವಾಲಂiÀiಕ್ಕೆ ಪ್ರಥಮ ದಲಿತ ಮುಖ್ಯ ಅರ್ಚಕ

ಪತ್ತನಂತಿಟ್ಟ : ಪಂಪಾ ಮತ್ತು ಮಣಿಮಾಲ ನದಿಗಳ ಸಂಗಮ ಸ್ಥಳವಾದ ತಿರುವಲ್ಲ ಸಮೀಪವಿರುವ ಪುಟ್ಟ ಗ್ರಾಮ ಕೀಝಚೆರಿವಲ್ಕಡವು. ಈ ಗ್ರಾಮದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ತಿರುವಾಂಕೂರು ದೇವಸ್ವಂ ಮಂಡಳಿಯ ಅಧೀನಕ್ಕೊಳಪಟ್ಟ 150 ವರ್ಷ ಪುರಾತನವಾದ ಮಣಪ್ಪುರಂ ಶಿವ ದೇವಾಲಯದ ಮುಖ್ಯ ಅರ್ಚಕರಾಗಿ (ಮೇಲ್ಸಾಂತಿ) ದಲಿತ ಯುವಕರೊಬ್ಬರು ಕಾರ್ಯಭಾರ ವಹಿಸಿಕೊಂಡಿದ್ದಾರೆ. ಅವರೇ 22 ವರ್ಷದ ಯದುಕೃಷ್ಣ. ತಿರುವಾಂಕೂರು ದೇವಸ್ವಂ ಮಂಡಳಿ ನೇಮಿಸಿದ ಪ್ರಪ್ರಥಮ ದಲಿತ ಮುಖ್ಯ ಅರ್ಚಕ ಇವರಾಗಿದ್ದಾರೆ.

ಪುಲಯ ಸಮುದಾಯಕ್ಕೆ ಸೇರಿದ ಇವರು ಎರ್ಣಾಕುಲಂನಲ್ಲಿರುವ ಶ್ರೀ ಗುರುದೇವ ವೈದಿಕ ತಂತ್ರ ವಿದ್ಯಾ ಪೀಠದ ಕೆ ಕೆ ಅನಿರುಧನ್ ತಂತ್ರಿಯವರಿಂದ ತರಬೇತಿ ಪಡೆದಿದ್ದಾರಲ್ಲದೆ ದೇವಸ್ಮ ನೇಮಕಾತಿ ಮಂಡಳಿ ನಡೆಸಿದ ಪ್ರಪ್ರಥಮ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ವಿಜೇತರಾಗಿದ್ದಾರೆ.

ತ್ರಿಶ್ಶೂರಿನ ಪಿ ಕೆ ರವಿ-ಲೀಲಾ ದಂಪತಿಯ ಪುತ್ರನಾಗಿರುವ ಯದುಕೃಷ್ಣ ಸದ್ಯ ಸಂಸ್ಕøತ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ದೇವಳದಲ್ಲಿ ಅರ್ಚಕನಾಗಿ ಕರ್ತವ್ಯ ನಿರ್ವಹಿಸುವುದು ಕೇವಲ ಒಂದು ಉದ್ಯೋಗವಲ್ಲ, ಬದಲಾಗಿ ಆರಾಧನೆಯಾಗಿದೆ ಎಂದು ಅವರು ಹೇಳುತ್ತಾರೆ.

ದಲಿತ ಮುಖ್ಯ ಅರ್ಚಕನೊಬ್ಬನನ್ನು ನೇಮಿಸಿ ತಿರುವಾಂಕೂರು ಅಭಿವೃದ್ಧಿ ಮಂಡಳಿ ಐತಿಹಾಸಿಕ ಕ್ರಮ ಕೈಗೊಂಡಿದೆಯೆಂಬ ಅಭಿಪ್ರಾಯ ಹಿಂದೂ ಐಕ್ಯವಾದಿ ಸಂಘಟನೆಯ ಟಿ ಪ್ರಭಾಕರ್ ಅವರದ್ದು.