ಕರ್ಣಾಟಕ ಬ್ಯಾಂಕ್ ಕುದ್ರೋಳಿ ಶಾಖೆಯಲ್ಲಿ ಬೆಂಕಿ

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಬಳಿ ಇರುವ ರಾಷ್ಟ್ರೀಕೃತ ಕರ್ಣಾಟಕ ಬ್ಯಾಂಕಿಗೆ ಮಂಗಳವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ.

ಕೂಡಲೇ ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಅಗ್ನಿಶಾಮಕದ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು. ಹೀಗಿದ್ದರೂ ಅದಾಗಲೇ ಸಾಕಷ್ಟು ದಾಖಲೆ ಪತ್ರಗಳು, ಪೀಠೋಪಕರಣಗಳು ಬೆಂಕಿ ಕೆನ್ನಾಲಗೆಗೆ ಸುಟ್ಟುಹೋಗಿವೆ.

ಬ್ಯಾಂಕಿನ ಮೊದಲ ಅಂತಸ್ತಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಸಾರ್ವಜನಿಕರೊಬ್ಬರು ರಾತ್ರಿ 9 ಗಂಟೆ ಸುಮಾರಿಗೆ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಕೂಡಲೇ ಎರಡು ಅಗ್ನಿ ಶಾಮಕ ವಾಹನಗಳಲ್ಲಿ ಬಂದ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಪಟ್ಟರು.

ಬೆಂಕಿ ಹಿಡಿಯಲು ಕಾರಣವೇನೆಂದು ತಿಳಿದುಬಂದಿಲ್ಲ. ಆದರೂ ಶಾರ್ಟ್ ಸಕ್ರ್ಯೂಟಿನಿಂದ ಉಂಟಾಗಿರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಮೊದಲ ಅಂತಸ್ತಿನ ಕ್ಯಾಶ್ ಕೌಂಟರಿನಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು, ನಷ್ಟದ ಅಂದಾಜು ತಿಳಿದುಬಂದಿಲ್ಲ. ಬೆಂಕಿ ಬಿದ್ದಿರುವ ವಿಚಾರ ತಿಳಿಯುತ್ತಿದ್ದಂತೆ ಬ್ಯಾಂಕಿನ ಹಿರಿಯ ಅಧಿಕಾರಿಗಳು ಇಲ್ಲಿಗೆ ಆಗಮಿಸಿ ಆತಂಕ ವ್ಯಕ್ತಪಡಿಸಿದರು.