ಎರ್ಮಾಳಿನ ಗದ್ದೆಯಲ್ಲಿ ಬಾರೀ ಬೆಂಕಿ ಅನಾಹುತ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ತೆಂಕ ಎರ್ಮಾಳಿನ ಬ್ರಹ್ಮಶ್ರೀ ನಾರಾಯಣ ಗುರು ಸಂಸ್ಥೆ ಬಳಿಯ ಗದ್ದೆ ಪ್ರದೇಶದಲ್ಲಿ ವಿದ್ಯುತ್ ಅವಘಡದಿಂದ ಬೆಂಕಿ ಕಾಣಿಸಿಕೊಂಡು ಬಹಳಷ್ಟು ತಾಳೆ ಮರಗಳು ನಾಶಗೊಂಡಿದ್ದು, ತಕ್ಷಣ ಚುರುಕಾದ ಸ್ಥಳೀಯರು ನೀರು ಎರಚಿ ಬೆಂಕಿಯನ್ನು ನಿಯಂತ್ರಿಸಿದರು.

ಮುಂಜಾನೆ 5-30ರ ಸುಮಾರು ಗದ್ದೆ ಪ್ರದೇಶದಲ್ಲಿ ಹಾದು ಹೋದ ಮುಖ್ಯ ವಿದ್ಯುತ್ ತಂತಿಗೆ ಮರದ ರೆಂಬೆಯೊಂದು ತಾಗಿದ್ದರಿಂದ ಬೆಂಕಿಯುಂಟಾಗಿ ಅದೇ ಬೆಂಕಿ ಬೃಹತ್ತಾಗಿ ವ್ಯಾಪಿಸಿ ಇಡೀ ಪ್ರದೇಶದಲ್ಲಿ ಬೆಂಕಿ ಹತ್ತಿಕೊಂಡಿದೆ. ಈ ಭಾಗದಲ್ಲಿ ರಸ್ತೆಯ ವ್ಯವಸ್ಥೆ ಇಲ್ಲದ ಕಾರಣ ಅಗ್ನಿಶಾಮಕ ವಾಹನ ಬರುವುದೂ ಅಸಾಧ್ಯವಾಗಿದ್ದು, ಇತ್ತ ಪಂಪ್ ನೀರು ಬಳಸಿ ಬೆಂಕಿ ಹಾರಿಸೋಣವೆಂದರೂ ತಂತಿಗಳು ಜೋಡಿಕೊಂಡಿದ್ದರಿಂದ ತೊಂದರೆಯಾಯಿತು. ಈ ಸಂದರ್ಭ ಸ್ಥಳೀಯರೆಲ್ಲಾ ಸೇರಿಕೊಂಡು ಬಾವಿಯಿಂದ ನೀರು ಸೇದಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭ ಗಾಳಿಯ ಒತ್ತಡವಿಲ್ಲದ ಪರಿಣಾಮ ಬೆಂಕಿ ಸುಲಭವಾಗಿ ನಿಯಂತ್ರಣಕ್ಕೆ ಬಂತ್ತಾದರೂ ಮತ್ತೆ ಗಾಳಿ ಆರಂಭವಾದ ಬಳಿಕ ಬೆಂಕಿ ಮರು ಜೀವ ಪಡೆದರೂ ಆಶ್ಚರ್ಯವಿಲ್ಲ.

ಈ ಬೆಂಕಿ ಆಕಸ್ಮಿಕಕ್ಕೆ ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂಬುದಾಗಿ ಸ್ಥಳೀಯರು ದೂರಿದ್ದಾರೆ.  ಈ ಪ್ರದೇಶದಲ್ಲಿ ವಿದ್ಯುತ್ತಿನ ಮುಖ್ಯ (ಎಚ್ ಟಿ) ತಂತಿಗೆ ತಾಗಿಕೊಂಡೇ ಮರಗಿಡಗಳಿದ್ದು ಈ ಬಗ್ಗೆ ಬಹಳಷ್ಟು ಬಾರಿ ಇಲಾಖಾ ಗಮನಕ್ಕೆ ತಂದರೂ ಈ ಮರಗಳ ರೆಂಬೆಗಳನ್ನು ತೆರವುಗೊಳಿಸುವ ಕೆಲಸಕ್ಕೆ ಇಲಾಖಾ ಸಿಬ್ಬಂಧಿಗಳು ಹೋಗದಿರುವುದರಿಂದ ಈ ಸಮಸ್ಯೆ ಜೀವಂತವಾಗಿದೆ ಎನ್ನುತ್ತಾರೆ.