ಭಟ್ಕಳ ಸ್ಮಶಾನದಲ್ಲಿ ಆಕಸ್ಮಿಕ ಬೆಂಕಿ

ಬೆಂಕಿ ಆರಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಪಟ್ಟಣದ ಮಣ್ಕುಳಿ ಹಿಂದೂ ರುಧ್ರಭೂಮಿಯಲ್ಲಿ ಗುರುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿದ್ದು, ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಆಗಬಹುದಾದ ದೊಡ್ಡ ದುರುಂತ ತಪ್ಪಿದಂತಾಗಿದೆ.

ಬೆಂಕಿಗೆ ರುದ್ರಭೂಮಿಯಲ್ಲಿನ ಗಿಡ ಮರಗಳು ಸುಟ್ಟು ಕರಕಲಾಗಿವೆ. ಬೆಂಕಿ ಸಂಪೂರ್ಣ ಸ್ಮಶಾನವನ್ನು ಆವರಿಸುತ್ತಾ, ಗಾಳಿಗೆ ಸನಿಹದ ಪೆಟ್ರೋಲ್ ಬಂಕ್ ಬಳಿಯ ತೆಂಗಿನ ಮರವೊಂದಕ್ಕೂ ತಗುಲಿತ್ತು. ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ಸಿಬ್ಬಂದಿನ್ನು ಕರೆಯಿಸಿದ್ದರಿಂದ ಅವರು ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದರು. ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸದಿದ್ದಲ್ಲಿ ಪೆಟ್ರೋಲ್ ಬಂಕಿಗೆ ಬೆಂಕಿ ಆವರಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ. ಸ್ಮಶಾನದ ಸನಿಹದಲ್ಲಿ ರಸ್ತೆ ಇದ್ದು, ಇದೇ ಮಾರ್ಗವಾಗಿ ತೆರಳುವ ಯಾರೋ ದಾರಿ ಹೋಕರು ಸೇದಿ ಎಸೆದ ಬೀಡಿ ಅಥವಾ ಸಿಗರೇಟು ಬೆಂಕಿ ಹತ್ತಿಕೊಳ್ಳಲು ಕಾರಣ ಎನ್ನಲಾಗಿದೆ. ಗುರುವಾರ ಬೆಳಿಗ್ಗೆಯಿಂದ ಗಾಳಿಯ ಪ್ರಮಾಣ ಹೆಚ್ಚಿದ್ದರಿಂದ ಬೆಂಕಿ ಒಮ್ಮೇಲೆ ಹೊತ್ತಿಕೊಳ್ಳಲು ಕಾರಣವಾಯಿತು.