ಶಬರಿಮಲೆ ಭಕ್ತರ ಕಾರಿನಲ್ಲಿ ಬೆಂಕಿ ನೆರವಿಗೆ ಧಾವಿಸಿದ ಸಚಿವ ಖಾದರ್

ಕಾರಿನ ಬೆಂಕಿ ಆರಿಸಿದ ಅಗ್ನಿಶಾಮಕ ಸಿಬ್ಬಂದಿ

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಶಬರಿಮಲೆಯಿಂದ ಹಿಂದಿರುಗುತ್ತಿದ್ದ ಭಕ್ತರ ಕಾರಿನಲ್ಲಿ ಏಕಾಏಕಿಯಾಗಿ ಕಾಣಿಸಿಕೊಂಡ ಬೆಂಕಿ ಕಂಡು ಅಯ್ಯಪ್ಪ ಭಕ್ತರು ಆಘಾತಕ್ಕೊಳಗಾಗಿದ್ದ ಸಂದರ್ಭದಲ್ಲಿ ಅದೇ ಮಾರ್ಗದ ಮೂಲಕ ಸಾಗುತ್ತಿದ್ದ ಸಚಿವ ಯು ಟಿ ಖಾದರ್ ಅವರು ಭಕ್ತರಲ್ಲಿ ಧೈರ್ಯ ತುಂಬಿ ಕಷ್ಟವನ್ನು ನಿವಾರಿಸಿದ ಘಟನೆ ಶುಕ್ರವಾರ ನಡೆದಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಭಕ್ತರು ಇಂಡಿಕಾ ಕಾರಿನಲ್ಲಿ ಶಬರಿಮಲೆಗೆ ತೆರಳಿದ್ದು, ಅಲ್ಲಿಂದ ಹಿಂತಿರುಗಿ ಶುಕ್ರವಾರ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಅವರು ಸಂಚರಿಸುತ್ತಿದ್ದ ಕಾರಿನಲ್ಲಿ ನಗರದ ಪಂಪ್ವೆಲ್-ನಂತೂರು ಮಧ್ಯೆ ದಿಢೀರ್ ಬೆಂಕಿ ಕಾಣಿಸಿಕೊಂಡಿತ್ತು. ಈ ಸಂದರ್ಭ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಸಚಿವ ಖಾದರ್, ಘಟನೆಯನ್ನು ಕಂಡು ವಾಹನ ನಿಲ್ಲಿಸಿ ಉರಿಯುತ್ತಿರುವ ಕಾರಿನತ್ತ ಧಾವಿಸಿದರು. ಬಳಿಕ ಸಚಿವ ಖಾದರ್ ಸಹಿತ ಹಲವು ಮಂದಿ ಸ್ಥಳೀಯರು ಬೆಂಕಿ ಆರಿಸಲು ಯತ್ನಿಸಿದರು.
ನಂತರ ಖಾದರ್ ಭಕ್ತರಿಗೆ ಊಟೋಪಚಾರದ ವ್ಯವಸ್ಥೆ ಮಾಡಿ, ಅವರಿಗೆ ಹುಬ್ಬಳ್ಳಿಗೆ ತೆರಳಲು ಹಣಕಾಸಿನ ನೆರವನ್ನೂ ನೀಡಿದರು. ಬಳಿಕ ಅಗ್ನಿಶಾಮಕ ದಳದ ವಾಹನ ಬಂದು ಬೆಂಕಿ ನಂದಿಸಿದೆ.