ಐತಿಹಾಸಿಕ ಬಾಕಿಮಾರು ಗದ್ದೆಗೆ ಬೆಂಕಿ

ಬಾಕಿಮಾರು ಗದ್ದೆಯಲ್ಲಿ ಬೆಂಕಿ

ತಪ್ಪಿದ ಭಾರೀ ಅನಾಹುತ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಒಣಹುಲ್ಲುಗಳಿಂದ ಆವೃತವಾಗಿದ್ದ ವಿಟ್ಲದ ಬಾಕಿಮಾರು ಗದ್ದೆಯ ಸುಮಾರು ಎರಡು ಎಕರೆಯಷ್ಟು ಭಾಗ ಆಕಸ್ಮಿಕ ಬೆಂಕಿಯಿಂದಾಗಿ ಹೊತ್ತಿ ಉರಿದ ಘಟನೆ ನಡೆದಿದೆ. ಸಾರ್ವಜನಿಕರು ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಸಕಾಲದಲ್ಲಿ ಬೆಂಕಿಯನ್ನು ಹತೋಟಿಗೆ ತಂದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ.

ವಿಟ್ಲ-ಕಾಸರಗೊಡು ರಸ್ತೆಯ ಐತಿಹಾಸಿಕ ಬಾಕಿಮಾರು ಗದ್ದೆಯಲ್ಲಿ ಶುಕ್ರವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದ ಬೆಂಕಿ ಕ್ಷಣಾರ್ಧದಲ್ಲಿ ಸುತ್ತುಮುತ್ತೆಲ್ಲಾ ಆವರಿಸಿಕೊಂಡಿತ್ತು. ಬಾಕಿಮಾರು ಗದ್ದೆಗೆ ತಾಗಿಕೊಂಡಿರುವ ಪೆಟ್ರೋಲ್ ಪಂಪು, ಸರಕಾರಿ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣದ ಗಡಿಭಾಗವನ್ನೆಲ್ಲಾ ಆವರಿಸಿಕೊಂಡಿದ್ದ ಬೆಂಕಿಯ ಕೆನ್ನಾಲೆಗಳು ಸುಮಾರು ಎರಡು ಎಕರೆ ಒಣಹುಲ್ಲಿನ ಗದ್ದೆಯನ್ನು ಆಹುತಿ ಪಡೆದಿತ್ತು. ತಕ್ಷಣವೇ ಜಾಗೃತರಾದ ಸಾರ್ವಜನಿಕರು, ಪೆಟೋಲ್ ಪಂಪ್ ಸಿಬ್ಬಂದಿ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಗಂಟೆಗಳ ಕಾಲ ಹೋರಾಡಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದ ಕಾರಣ ಸಂಭವಿಸಲಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.