ಶಾರ್ಟ್ ಸಕ್ರ್ಯೂಟಿಂದ ಗುಡ್ಡಕ್ಕೆ ಬೆಂಕಿ

ಮರಕ್ಕಿಣಿ ಮತ್ತು ಅಳಿಕೆಯಲ್ಲಿ ಹೊತ್ತಿ ಉರಿದ ಅರಣ್ಯ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದಾಗಿ ಅಳಿಕೆ ಮತ್ತು ಮರಕ್ಕಿಣಿಯಲ್ಲಿ ಗುಡ್ಡಗಳು ಬೆಂಕಿಗಾಹುತಿಯಾಗಿ ಬೆಲೆಬಾಳುವ ಮರಗಳು ನಾಶವಾಗಿವೆ.

17vittla2

ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಮರಕ್ಕಿಣಿ ಎಂಬಲ್ಲಿನ ಮಸೀದಿ ಮುಂಭಾಗದಲ್ಲಿದ್ದ ವಿದ್ಯುತ್ ಪರಿವರ್ತಕದಿಂದ ಬೆಂಕಿಯುಂಡೆಗಳು ಕೆಳಕ್ಕೆ ಉದುರಿದ ಪರಿಣಾಮ ಪಕ್ಕದಲ್ಲಿನ ಗುಡ್ಡ ಬೆಂಕಿಗಾಹುತಿಯಾಗಿದೆ. ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಗಂಭೀರತೆ ಅರಿತ ಸ್ಥಳೀಯರು ಪುತ್ತೂರು ಮತ್ತು ಬಂಟ್ವಾಳ ಅಗ್ನಿಶಾಮಕ ಕಚೇರಿಗೆ ಮಾಹಿತಿ ನೀಡಿದರು. ಆದರೆ ಅಗ್ನಿಶಾಮಕ ಸಿಬ್ಬಂದಿ  ಸ್ಥಳಕ್ಕಾಗಮಿಸದೆ ಉಡಾಫೆಯಿಂದ ವರ್ತಿಸಿದ್ದಾರೆಂದು ಆರೋಪಿಸಿದ ಸ್ಥಳೀಯರು, ಬಳಿಕ 108 ತುರ್ತು ವಾಹನದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ತುರ್ತು ವಾಹನದ ಸಿಬ್ಬಂದಿ ಕೂಡಾ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನ ಕಂಡಿಲ್ಲ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಹತ್ತಿಕೊಂಡ ಬೆಂಕಿ ಮೂರು ಗಂಟೆಯವರೆಗೂ ಗುಡ್ಡವನ್ನೆಲ್ಲಾ ಅವರಿಸಿದ್ದರಿಂದಾಗಿ ಹಲವಾರು ಬೆಲೆಬಾಳುವ ಮರ-ಗಿಡಗಳು ನಾಶವಾಗಿವೆ. ಸ್ಥಳಕ್ಕಾಗಮಿಸಿದ ಕೇಪು ಪಂ ಸದಸ್ಯ ಕರೀಂ ಕುದ್ದುಪದವು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದಾಗಿ ಆಗಮಿಸಿದ್ದ ಅರಣ್ಯ ಸಿಬ್ಬಂದಿ ಸ್ಥಳೀಯರೊಂದಿಗೆ ಕೈಜೋಡಿಸಿ ಸಂಜೆಯ ವೇಳೆಗೆ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಸಂದರ್ಭ ಅಳಿಕೆ ಸತ್ಯಸಾಯಿ ವಿಹಾರದ ಪರಿಸರದಲ್ಲಿನ ಗುಡ್ಡದಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಸುಮಾರು 5 ಎಕರೆಗೂ ಹೆಚ್ಚು ನಾಶವಾಗಿದೆ. ಎರಡೂ ಘಟನೆಗಳಿಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಕಾರಣವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.