ಬೈಲಪಾರ ಅರಣ್ಯದಲ್ಲಿ ಬೆಂಕಿ

ಸಾಂದರ್ಭಿಕ ಚಿತ್ರ

ಇಲಾಖೆ ನಿರ್ಲಕ್ಷ್ಯಕ್ಕೆ ಜನರ ಅಸಮಾಧಾನ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಕಳೆದ ಎರಡ್ಮೂರು ದಿನಗಳಿಂದ ಜೋಯಿಡಾ ತಾಲೂಕಿನ ಬೈಲಪಾರ ಪ್ರದೇಶದ ಅರಣ್ಯದಲ್ಲಿ ರಸ್ತೆಯ ಪಕ್ಕ ಬೆಂಕಿ ಹತ್ತಿ ಉರಿದರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಜೋಯಿಡಾ ತಾಲೂಕು ರಾಜ್ಯದಲ್ಲಿಯೇ ವಿಸ್ತಾರವಾದ ಅರಣ್ಯ ಹೊಂದಿದೆ. ಹಳ್ಳ-ಕೊಳ್ಳಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಕಳೆದ 2 ವರ್ಷಗಳ ಬರಗಾಲದಿಂದಾಗಿ ಹಳ್ಳ-ಕೊಳ್ಳಗಳು ಬತ್ತಿ ಹೋಗಿದ್ದು, ಅರಣ್ಯ ಪ್ರದೇಶ ಒಣಗಿದೆ. ಎಲ್ಲೇ ಒಂದು ಕಡೆ ಬೆಂಕಿ ಬಿದ್ದರೂ ಇಡೀ ಅರಣ್ಯ ಪ್ರದೇಶಕ್ಕೆ ವ್ಯಾಪಿಸುವ ಸಾಧ್ಯತೆಗಳೇ ಹೆಚ್ಚು. ಇಂಥ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಾಕಷ್ಟು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ.

ತಾಲೂಕಿನ ಬೈಲಪಾರ ಅರಣ್ಯ ಪ್ರದೇಶ ಕಾಳಿ ಹುಲಿ ಯೋಜನೆಯ ಹಿರಿಯ ಅಧಿಕಾರಿಗಳ ಕಚೇರಿ ಇರುವ ದಾಂಡೇಲಿಯ ಪಕ್ಕದಲ್ಲಿಯೇ ಇದೆ. ಆದರೂ ಬೈಲಪಾರ ಅರಣ್ಯ ಪ್ರದೇಶದಲ್ಲಿ 3 ದಿನಗಳಿಂದ ಬೆಂಕಿ ಉರಿಯುತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಕಂಡು ಕಾಣದಂತೆ ಸುಮ್ಮನಿರುವುದು ಅಚ್ಚರಿ ತಂದಿದೆ.

ಅರಣ್ಯ ಇಲಾಖೆ ಪ್ರತಿವರ್ಷವೂ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ರಸ್ತೆಯ ಪಕ್ಕದಲ್ಲಿ ಒಣಗಿದ ಎಲೆಗಳನ್ನು ಒಟ್ಟುಗೂಡಿಸಿ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿದೆ. ಆದರೆ ಇದೂ ತೀರಾ ತಪ್ಪು ಕೆಲಸವಾಗಿದೆ. ರಸ್ತೆ ಪಕ್ಕದ ಒಣಗಿದ ಎಲೆಗಳಿಗೆ ಬೆಂಕಿ ಹಚ್ಚುವುದರಿಂದ ಕಾಡಿಗೂ ಬೆಂಕಿ ವ್ಯಾಪಿಸುವ ಸಾಧ್ಯತೆ ಇದೆ.

ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆ ಪಕ್ಕದಲ್ಲಿ ಬೆಂಕಿ ಹಚ್ಚಿ ತಮ್ಮ ಕೆಲಸವಾಯಿತು ಎಂದು ಹೋಗಿ ಬಿಡುತ್ತಾರೆ. ಆದರೆ ಈ ಬೆಂಕಿ ಕಾಡಿಗೆ ವ್ಯಾಪಿಸುತ್ತದೆ. ಕಳೆದ ವರ್ಷ ಇದರಿಂದಾಗಿಯೇ ಸಾಕಷ್ಟು ಅರಣ್ಯ ಪ್ರದೇಶ ಬೆಂಕಿಯಿಂದ ನಾಶವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಈ ಕ್ರಮಕ್ಕೆ ಜನರು ತೀರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ರಸ್ತೆಯ ಪಕ್ಕದಲ್ಲಿ ಬೆಂಕಿ ಹಚ್ಚಿದರೂ ಅದನ್ನು ಆರಿಸಿಯೇ ಅರಣ್ಯ ಇಲಾಖೆಯ ಸಿಬ್ಬಂದಿ ತಮ್ಮ ಕೆಲಸಕ್ಕೆ ಹೋಗುವುದು ಸೂಕ್ತ. ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಬೆಂಕಿ ಬಿದ್ದ ಪ್ರದೇಶಕ್ಕೆ ತಕ್ಷಣ ಹೋಗಿ ಬೆಂಕಿ ಆರಿಸುವ ಕೆಲಸ ಮಾಡಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.