50 ಎಕರೆ ಹುಲ್ಲುಗಾವಲು ಪ್ರದೇಶ ಬೆಂಕಿಗಾಹುತಿ

ಹೊತ್ತಿಯುರಿದ ಹುಲ್ಲುಗಾವಲು ಪ್ರದೇಶ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಕೊೈಲದ ಪಶು ಸಂಗೋಪನಾ ಕ್ಷೇತ್ರ ವ್ಯಾಪ್ತಿಯ ಸುಮಾರು 50 ಎಕರೆಗೂ ಅಧಿಕ ಹುಲ್ಲುಗಾವಲು ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಸೋಮವಾರ ನಡೆದಿದೆ.

ಗಂಡಿಬಾಗಿಲು ರಸ್ತೆ ಬದಿಯಲ್ಲಿ ಕೊೈಲ ಪಶು ಸಂಗೋಪನಾ ಕ್ಷೇತ್ರದೊಳಗಿನ ಆನೆಗುಂಡಿ ಸಂಪರ್ಕದ ಮೋರಿ ಬಳಿಯಿಂದ ಹೊತ್ತಿಕೊಂಡ ಬೆಂಕಿಯು ಕ್ಷಣಾರ್ಧದಲ್ಲಿ ಹರಡಿಕೊಂಡು ಗಂಡಿಬಾಗಿಲು ಗುಡ್ಡವನ್ನು ಆವರಿಸಿ ಮುಂದೆ ಆನೆಗುಂಡಿ, ಕೊೈಲ ಗೇಟ್ ಬಳಿಯ ಗುಡ್ಡದ ತನಕ ಸುಮಾರು 50 ಎಕ್ರೆಗೂ ಅಧಿಕ ಪ್ರದೇಶದ ಹುಲ್ಲುಗಾವಲುಗಳನ್ನು ತನ್ನ ಕೆನ್ನಾಲಿಗೆಗೆ ಆಹುತಿ ಪಡೆದುಕೊಂಡಿದೆ.

ವರ್ಷಂಪ್ರತಿ ಇಲ್ಲಿ ಬೆಂಕಿ ಕಾಣಿಸಿಕೊಂಡು ಹುಲ್ಲುಗಾವಲು ಸುಟ್ಟು ಭಸ್ಮವಾಗುವಂತದ್ದು ಸಾಮಾನ್ಯವಾಗಿದೆ. ದಾರಿಯಲ್ಲಿ ಹೋಗುವವರು ಬೀಡಿ, ಸಿಗರೇಟು ಸೇದಿ ಮುಳಿಹುಲ್ಲು ಮೇಲೆ ಹಾಕಿ ಹೋಗುವುದರಿಂದ ಹುಲ್ಲುಗಾವಲಿಗೆ ಬೆಂಕಿ ಹಿಡಿದರೆ, ಕೆಲ ಬಾರಿ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಾಕುವುದು ನಡೆಯುತ್ತದೆ. ಇನ್ನು ಕೆಲವು ಮಕ್ಕಳು ಆಟವಾಡುತ್ತಾ ಬೆಂಕಿ ಕೊಡುವುದೂ ನಡೆಯುತ್ತದೆ. ಬೇಸಿಗೆಯಲ್ಲಿ ಗುಡ್ಡದ ಹುಲ್ಲುಗಳು ಚೆನ್ನಾಗಿ ಒಣಗಿರುವ ಕಾರಣ ವೇಗವಾಗಿ ಬೆಂಕಿ ಹರಡುತ್ತದೆ.

ಜೀವ ಜಂತುಗಳ ಸಜೀವ ದಹನ

ಈ ಮಧ್ಯೆ ಹುಲ್ಲುಗಾವಲಿನಲ್ಲಿ ಆಶ್ರಯ ಪಡೆದುಕೊಂಡಿದ್ದ ಮೊಲ, ಹಾವು ಮೊದಲಾದ ಜೀವಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬೆಂದು ಹೋಗಿದ್ದು ಕಂಡುಬಂದಿದೆ. ಕೆಲ ಹಾವುಗಳು ಅರೆ ಬೆಂದ ಸ್ಥಿತಿಯಲ್ಲಿ ಜೀವ ರಕ್ಷಣೆ ಸಲುವಾಗಿ ಎಲ್ಲೆಡೆ ಓಡಿ ಹೋಗುತ್ತಿದ್ದ ದೃಶ್ಯ ಕಂಡು ಬರುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹಿಂದೆಲ್ಲಾ ಮಳೆಗಾಲ ಮುಗಿದು ಬಿಸಿಲು ಆವರಿಸಿ ಮುಳಿಹುಲ್ಲು ಒಣಗುತ್ತಿದ್ದಂತೆ ಮುಳಿಹುಲ್ಲು ರಕ್ಷಣೆ ಸಲುವಾಗಿ ಕ್ಷೇತ್ರದ ಸುತ್ತಲೂ ಬೆಂಕಿ ಹಾಕಿ ಮತ್ತೆ ಬೀಳುವ ಬೆಂಕಿ ಹರಡದಂತೆ `ಫೈರ್ ಬೆಲ್ಟ್’ ನಡೆಸುತ್ತಿದ್ದರು. ಆದರೆ ಈ ಬಾರಿ ಅದು ನಡೆಯದ ಕಾರಣ ಇಂದು ಈ ರೀತಿಯಾಗಿ ಹೊತ್ತಿ ಉರಿಯುವಂತಾಗಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತು ನಿರ್ಲಕ್ಷ್ಯ ವಹಿಸಿದ್ದರಿಂದಲೇ ಇಷ್ಟೊಂದು ಪ್ರಮಾಣದ ಹುಲ್ಲುಗಾವಲು ಬೆಂಕಿಗಾಹುತಿಯಾಗಲು ಕಾರಣ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಹುಲ್ಲುಗಾವಲಿಗೆ ಬೆಂಕಿ ಬಿದ್ದಿದೆ ಎಂದು ಗೊತ್ತಾಗುತ್ತಲೇ ಸ್ಥಳೀಯ ಸಾರ್ವಜನಿಕರು, ರಿಕ್ಷಾ ಚಾಲಕರು ಧಾವಿಸಿ ಬಂದು ಬೆಂಕಿ ನಂದಿಸಲು ಮುಂದಾದರು. ಬಳಿಕ ಬೆಳ್ತಂಗಡಿಯಿಂದ ಅಗ್ನಿಶಾಮಕ ದಳವೂ ಆಗಮಿಸಿದ್ದು, ಎಲ್ಲರೂ ಸುಮಾರು 1 ತಾಸು ಕಾಲ ಅವಿತರ ಶ್ರಮದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.