ಶಾರ್ಟ್ ಸರ್ಕ್ಯೂಟಿಂದ ಮನೆಗೆ ಬೆಂಕಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೊರವಲಯದ ಕಾವೂರಿನ ಗಾಂಧಿ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಮನೆಗೆ ಬೆಂಕಿ ಹಿಡಿದ ಪರಿಣಾಮ ಮನೆ ಭಾಗಶಃ ಸುಟ್ಟು ಲಕ್ಷಾಂತರ ರೂಪಾಯಿ ಸೊತ್ತಿನ ಹಾನಿ ಉಂಟಾಗಿದೆ.

ಕಾವೂರಿನ ಪೇಟೆಯಲ್ಲಿ ಗೂಡಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದ ಶರೀಫ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಶಾರ್ಟ್ ಸರ್ಕ್ಯೂಟಿನಿಂದ ಬೆಂಕಿ ತಗಲಿರುವ ಶಂಕೆ ವ್ಯಕ್ತವಾಗಿದೆ. ಕೋಣೆಯೊಳಗೆ ಇದ್ದ ಫ್ಯಾನ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಒಂದೂವರೆ ತಿಂಗಳ ಹಿಂದೆಯಷ್ಟೇ ಪುತ್ರಿ ವಿವಾಹ ಮುಗಿಸಿದ್ದು, ಪುತ್ರಿಗೆ ಸೇರಿದ ಬೆಲೆಬಾಳುವ ಸೀರೆಗಳು ಕೂಡಾ ಮನೆಯಲ್ಲಿದ್ದವು ಎಂದು ಘಟನಾ ಸ್ಥಳದಲ್ಲಿದ್ದ ಶರೀಫ್ ಅವರ ಸಹೋದರ ಹಮೀದ್ ಮಾಧ್ಯಮದವರಲ್ಲಿ ಹೇಳಿದರು.

ಮನೆಯಲ್ಲಿದ್ದ ಎಲೆಕ್ಟ್ರಾನಿಕ್ಸ್ ಉಪಕರಣ, ಕಾಪಾಟು ಹಾಗೂ ಬಟ್ಟೆ ಸುಟ್ಟು ಕರಲಾಗಿದೆ. ಕಪಾಟಿನಲ್ಲಿ ಸ್ವಲ್ಪ ನಗದು ಹಣ ಹಾಗೂ ದಾಖಲೆ ಪತ್ರಗಳೂ ಇದ್ದು, ಅವೆಲ್ಲವೂ ಬೆಂಕಿಗೆ ಆಹುತಿಯಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದರು.