ಪುದುಕೋಳಿ ಪರಿಸರದಲ್ಲಿ ಆತಂಕ ಸೃಷ್ಟಿಸಿದ ಬೆಂಕಿ

ಪುದುಕೋಳಿ ಪರಿಸರದಲ್ಲಿ ವ್ಯಾಪಿಸಿದ ಬೆಂಕಿಯನ್ನು ಅಗ್ನಿ ಶಾಮಕ ಸಿಬ್ಬಂದಿ ನಿಯಂತ್ರಿಸಿದರು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನೀರ್ಚಾಲು ಸಮೀಪದ ಪುದುಕೋಳಿ ಪರಿಸರ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದ ಬೆಂಕಿ ಆಕಸ್ಮಿಕ ಸಂಭವಿಸಿ ಸಾರ್ವಜನಿಕರ ಭೀತಿಗೆ ಕಾರಣವಾಯಿತು.

ನೀರ್ಚಾಲು-ಮಾನ್ಯ-ಕಾಸರಗೋಡು ರಸ್ತೆಯ ಪುದುಕೋಳಿ ಬಸ್ ನಿಲ್ದಾಣ ಪರಿಸರದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ವ್ಯಾಪಿಸಿ ನೂರಾರು ಎಕ್ರೆಗಳಷ್ಟು ಬೆಳೆದಿರುವ ಮುಳಿಹುಲ್ಲಿನ ಮೂಲಕ ಬಾನೆತ್ತರ ಬೆಂಕಿಯ ಕೆನ್ನಾಲಿಗೆ ಪಸರಿಸಿತು. ಹುಲುಸಾಗಿ ಬೆಳೆದ ಮುಳಿಹುಲ್ಲಿಂದ ಬಹು ಬೇಗನೆ ವ್ಯಾಪಿಸಿದ ಬೆಂಕಿ ತಲ್ಪನಾಜೆ ಪರಿಸರದತ್ತ ಹಬ್ಬಿ ಸ್ಥಳೀಯ ನಿವಾಸಿಗಳ ಭಯಕ್ಕೆ ಕಾರಣವಾಯಿತು. ಬಳಿಕ ಆಗಮಿಸಿದ ಕಾಸರಗೋಡಿನ ಅಗ್ನಿ ಶಾಮಕದಳ ಗಂಟೆಗಳಷ್ಟು ಹೊತ್ತು ಹರಸಾಹಸಪಟ್ಟು ಸಂಜೆ 5ರ ವೇಳೆಗೆ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ನೂರಾರು ಮರಗಳು, ಪ್ರಾಣಿ ಪಕ್ಷಿಗಳು ಆಹುತಿಯಾದವು. ಸ್ಥಳೀಯರು ಮನೆಗಳಿಗೆ ಬೆಂಕಿ ವ್ಯಾಪಿಸದಂತೆ ಕ್ರಮಕೈಗೊಂಡರು.

ಕಳೆದ ಮೂರು ವರ್ಷಗಳಿಂದ ಪುದುಕೋಳಿ ಪರಿಸರ ಸಹಿತ ಸುತ್ತಲ ಪ್ರದೇಶಗಳಲ್ಲಿ ಬೆಂಕಿ ಆಕಸ್ಮಿಕಗಳು ಡಿಸೆಂಬರ್ ತಿಂಗಳಾಂತ್ಯಗೊಳ್ಳುತ್ತಿರುವಂತೆ ಆರಂಭವಾಗುತ್ತದೆ. ಬಯಲು ಹಾಗೂ ಪೆÇದೆಗಳಿಂದ ಕೂಡಿದ ಪ್ರದೇಶವಾಗಿರುವುದರಿಂದ ಗಾಳಿಯ ತೀವ್ರತೆಗೆ ಬೆಂಕಿ ಬಹುಬೇಗನೆ ವ್ಯಾಪಿಸುತ್ತವೆ. ಕಿಡಿಗೇಡಿಗಳು ಅಥವಾ ಎಸೆದ ಲೈಟರುಗಳಲ್ಲಿ ಅಳಿದುಳಿದಿರುವ ಅನಿಲಗಳು ಬಿಸಿಲಿಗೆ ಒಡೆದು ಆಕಸ್ಮಿಕ ಬೆಂಕಿ ಸೃಷ್ಟಿಯಾಗುತ್ತಿರಬಹುದೆಂದು ಸಂಶಯಿಸಲಾಗಿದೆ.

ವಿಶಾಲವಾದ ಬಯಲುಗಳಲ್ಲಿ ಹುಲುಸಾಗಿ ಬೆಳೆದಿರುವ ಮುಳಿಹುಲ್ಲಿಂದ ಬೆಂಕಿ ಬೇಗನೆ ಹತ್ತಿಕೊಳ್ಳುತ್ತಿದ್ದು, ಬಯಲೊಳಗಿನ ಕಂದರಗಳ ಕಾರಣ ಕೆಲವೆಡೆಗಳಿಗೆ ಅಗ್ನಿ ಶಾಮಕದಳದ ವಾಹನಗಳಿಗೂ ತೆರಳುವ ಸಮಸ್ಯೆ ಎದುರಾಗುವುದರಿಂದ ಬೆಂಕಿಯ ನಿಯಂತ್ರಣ ತ್ರಾಸದಾಯಕವಾಗಿದೆ.