ಮಣಿಪಾಲ ಕಂಪೆನಿ ಮೇಲೆ ಎಫೈಆರ್

ಸಾಂದರ್ಭಿಕ ಚಿತ್ರ

ಮಹಾ ಅಂಚೆ ಸೇವಕರ ನೇಮಕಾತಿ ಹಗರಣ

ಮುಂಬೈ : ಮಹಾರಾಷ್ಟ್ರದಲ್ಲಿ ಅಂಚೆ ನೇಮಕಾತಿಯ 24,000 ಹುದ್ದೆಗಳಲ್ಲಿ ನಡೆದಿರುವ ಭಾರೀ ಮೋಸವೊಂದನ್ನು ಗುಪ್ತಚರ ವಿಭಾಗ ಬಯಲುಗೊಳಿಸಿದೆ. ಅಂಚೆ ವಿಭಾಗದಲ್ಲಿ ನೇಮಕಾತಿಗೆ 2015ರಲ್ಲಿ ನಡೆಸಲಾಗಿದ್ದ ಪೋಸ್ಟ್‍ಮ್ಯಾನ್, ಮೈಲ್ ಗಾರ್ಡುಗಳು ಮತ್ತು ವಿವಿಧ ಸಿಬ್ಬಂದಿ ಕೋರ್ಸಿನಲ್ಲಿ ಮಣಿಪಾಲ ಟೆಕ್ನಾಲಾಜಿಸ್ ಲಿಮಿಟೆಡ್ (ಎಂಟಿಎಲ್) ಲಾಭ ಪಡೆದಿದ್ದು, ಇದರ ವಿರುದ್ಧ ಮುಂಬೈ ಪೊಲೀಸ್ ಎಫ್‍ಐಆರ್ ದಾಖಲಿಸಿಕೊಂಡಿದೆ.

ಮುಂಬೈಯಲ್ಲಿ ಎಂಟಿಎಲ್ಲಿನ ಪಿ ವಿ ಮಲ್ಯ ಮತ್ತು ಇತರ ಆಡಳಿತಗಾರರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಆದಾಗ್ಯೂ ನವಂಬರ್ 3ರಂದು ಮಲ್ಯರ ಬಂಧನಕ್ಕೆ ಮುಂಬೈ ಕೋರ್ಟಿನ ಜಸ್ಟಿಸ್ ಎ ಎಂ ಬದರ್ ನಿರಾಕರಿಸಿದ್ದರು.

ಈ ಕೇಸಿನಲ್ಲಿ ಇದುವರೆಗೆ ಯಾರೊಬ್ಬರ ಬಂಧನವಾಗಿಲ್ಲ. ಆದರೆ ಕೋರ್ಸ್ ಹುದ್ದೆಗಳ ಮೇಲೆ ನಿಯಂತ್ರಣ ಸಾಧಿಸಿದ್ದ ಕಾರ್ಪೊರೆಟ್ಟಿನ ಮ್ಯಾನೇಜರುಗಳ ಪೊಲೀಸ್ ವಿಚಾರಣೆ ಮುಂದುವರಿದಿದೆ ಎಂದು ಆರ್ಥಿಕ ಅಪರಾಧಗಳ ಘಟಕ ಹೇಳಿದೆ.

2015ರಲ್ಲಿ ಪೋಸ್ಟ್ ಹುದ್ದೆಗಳಿಗೆ ನಡೆದಿದ್ದ ಪರೀಕ್ಷೆಗಳ ಫಲಿತಾಂಶ 2016ರಲ್ಲಿ ಪ್ರಕಟಗೊಂಡಿತ್ತು. ಎಂಟಿಎಸ್ ಆಗ 1,680 ಪೋಸ್ಟ್ ಮ್ಯಾನುಗಳು, 21 ಮೈಲ್ ಗಾರ್ಡುಗಳು ಮತ್ತು 733 ಬಹು-ಕೌಶಲ್ಯ ಸೇವಕರನ್ನು ಭರ್ತಿಗೊಳಿಸಿತ್ತು.

ಅಂಚೆ ನೇಮಕಾತಿಯಲ್ಲಿ ನಡೆದಿದ್ದ ಮೋಸದ ವಿರುದ್ಧ ಅಮರಾವತಿಯಿಂದ ಎಪ್ರಿಲಿನಲ್ಲಿ ಪ್ರಥಮ ದೂರು ದಾಖಲಾಗಿದ್ದು, ಮುಖ್ಯ ಪೋಸ್ಟ್‍ಮಾಸ್ಟರ್ ಈ ಬಗ್ಗೆ ತನಿಖೆ ನಡೆಸುವಂತೆ ಗುಪ್ತಚರ ಇಲಾಖೆಗೆ ಆದೇಶಿಸಿದ್ದರು.