ವಾಣಿಜ್ಯ ಉದ್ದೇಶಕ್ಕೆ ಅಕ್ರಮ ನೀರು ಬಳಕೆ ಪತ್ತೆ ಹಚ್ಚಿರಿ

ಸಾಂದರ್ಭಿಕ ಚಿತ್ರ

ಶಂಭೂರು ಎ ಎಂ ಆರ್ ಡ್ಯಾಮಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಸರಿ ಸುಮಾರು 17 ಮೀಟರ್ ನೀರು ತುಂಬಿದ್ದು ಪಶ್ಚಿಮ ಘಟ್ಟಗಳ ಕಡೆಯಿಂದ ಹರಿದು ಬರುವ ನೀರು ಈ ಡ್ಯಾಮಿಗೆ ಸೇರಿ ಅಲ್ಲಿಂದ ತುಂಬೆಯ ಹೊಸ ವೆಂಟೆಡ್ ಡ್ಯಾಮನ್ನು ತಲುಪುತ್ತದೆ.
ಕಳೆದೆರಡು ತಿಂಗಳಿನಿಂದ ತುಂಬೆ ಹೊಸ ಡ್ಯಾಮಿನಲ್ಲಿ ಐದು ಮೀಟರ್ ನೀರು ಇದ್ದು ಮಂಗಳೂರು ನಗರಕ್ಕೆ ಅಲ್ಲಿಂದ ಪೂರೈಕೆಯಾಗುತ್ತಿರುವ ನೀರಿನಲ್ಲಿ ವ್ಯತ್ಯಯವಾಗಿದ್ದು, ದೈನಂದಿನ ಅಗತ್ಯಗಳಿಗೆ ಅಗತ್ಯವಿರುವ ನೀರನ್ನು ಪಡೆದುಕೊಳ್ಳಲು ಜನಸಾಮಾನ್ಯರು ಪರದಾಡಬೇಕಾದ ಅತಂತ್ರ ಸ್ಥಿತಿ ಉದ್ಭವಿಸಿದೆ.
ವಾಸ್ತವವಾಗಿ ಗೃಹಬಳಕೆಗಿಂತ ಕಟ್ಟಡ ನಿರ್ಮಾಣ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಹೆಚ್ಚು ನೀರು ಬಳಕೆಯಾಗುತ್ತಿದ್ದು ಬೇಸಿಗೆಯಲ್ಲಿ ಇವೆರಡು ಉದ್ದೇಶಗಳಿಗೆ ನೀರಿನ ಬಳಕೆಯನ್ನು ನಿಷೇಧಿಸುವ ಬದಲು ನೀರಿನ ಕೃತಕ ಅಭಾವ ಉಂಟು ಮಾಡಿ ಜನಸಾಮಾನ್ಯರಿಗೆ ತೊಂದರೆ ನೀಡಲಾಗುತ್ತಿದೆ ಎಂಬುದು ವಾಸ್ತವವಾಗಿದೆ. ಸದ್ಯಕ್ಕೆ ಪ್ರತಿದಿನ ನಗರಕ್ಕೆ ನೀರು ಸರಬರಾಜು ಮಾಡಿ ಮುಂದಿನ ದಿನಗಳಲ್ಲಿ ತುಂಬೆ ವೆಂಟೆಡ್ ಡ್ಯಾಮ್‍ನಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಐದು ಮೀಟರಿಗಿಂತ ಕಡಿಮೆಯಾದಲ್ಲಿ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬಹುದಾಗಿದೆ.
ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಮಧ್ಯಪ್ರವೇಶಿಸಿ ಮಂಗಳೂರು ನಗರ ಪಾಲಿಕೆ ಸಾರ್ವಜನಿಕರಿಗೆ ಸಮರ್ಪಕ ರೀತಿಯಲ್ಲಿ ನೀರು ಪೂರೈಕೆಯಾಗುವಂತೆ ವ್ಯವಸ್ಥೆ ಮಾಡಿಕೊಡಬೇಕಾಗಿ ವಿನಂತಿ

  • ಆಲಿ ಹಸನ್  ಮಂಗಳೂರು