ಕಂಬಳಕ್ಕೆ ಹರಿದುಬಂದ ಚಿತ್ರ ತಾರೆಯರ ಬೆಂಬಲ

ಯಶ್, ರಕ್ಷಿತ್ ಶೆಟ್ಟಿ, ಪ್ರೇಮ್, ರಾಗಿಣಿ, ಜಗ್ಗೇಶ್

ಕರಾವಳಿ ಅಲೆಯಲ್ಲಿ ಮಾತ್ರ

ವಿಶೇಷ ವರದಿ

ಮಂಗಳೂರು : ನೆರೆಯ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಹೋರಾಟಕ್ಕೆ ಸಂದ ವಿಜಯವು ಹೈಕೋರ್ಟಿನಿಂದ ನಿಷೇಧಿಸಲ್ಪಟ್ಟಿರುವ  ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಹೆಚ್ಚಿನ ಜನ ಬೆಂಬಲ ದೊರೆಯುವಂತೆ ಮಾಡಿದೆ. ಇದೀಗ ಚಿತ್ರ ತಾರೆಯರೂ ಕಂಬಳವನ್ನು ಬೆಂಬಲಿಸಿ ಹಾಗೂ ಅದರ ನಿಷೇಧವನ್ನು ವಿರೋಧಿಸಿ ಹೇಳಿಕೆ ನೀಡಿ, “ನಾವೂ ಕಂಬಳ ಪ್ರೇಮಿಗಳಾಗಿದ್ದೇವೆ ಹಾಗೂ ಕಂಬಳ ಮೇಲಿನ ನಿಷೇಧ ತೆರವುಗೊಳಿಸುವ ಹೋರಾಟದಲ್ಲಿ ನಿಮ್ಮ ಜತೆಗಿದ್ದೇವೆ” ಎಂದು ಕಂಬಳ ಹೋರಾಟಗಾರರಿಗೆ ಮನವರಿಕೆ ಮಾಡಿದ್ದಾರೆ.

“ನಾನು ಕಂಬಳದ ಪರವಾಗಿದ್ದೇನೆ. ಕೋಣಗಳನ್ನು ಕೇವಲ ಕಂಬಳದ ಋತುವಿನ ಸಂದರ್ಭ ಆರೈಕೆ ಮಾಡಲಾಗುತ್ತಿಲ್ಲ. ಅವುಗಳನ್ನು ವರ್ಷಪೂರ್ತಿ ಪ್ರೀತಿಯಿಂದ ಸಲಹಲಾಗುತ್ತದೆ. ರೈತರು ಹಾಗೂ ಅವರು ಸಲಹುವ ಪ್ರಾಣಿಗಳ ನಡುವೆ ಅವಿನಾಭಾವ ಸಂಬಂಧವಿದೆ. ಕಂಬಳದ ನಿಷೇಧದಿಂದ ನಾವು ನಮ್ಮ ಅಸ್ತಿತ್ವವನ್ನೇ ಕಳೆದುಕೊಂಡಂತೆ. ನಮ್ಮ ಸಂಸ್ಕøತಿ-ಸಂಪ್ರದಾಯವನ್ನು ಮರೆಯಾಗಿಸುವ ಯತ್ನಗಳನ್ನು ಅನುಮತಿಸುವ ಹಾಗಿಲ್ಲ” ಎಂದಿದ್ದಾರೆ ಜನಪ್ರಿಯ ನಟ ಯಶ್.

ಚಿತ್ರ ನಿರ್ಮಾಪಕ ಪ್ರೇಮ್ ಕೂಡ ಪ್ರತಿಕ್ರಿಯಿಸಿ, ಇಂತಹ ವಿಚಾರಗಳಲ್ಲಿನ ಹೋರಾಟದಲ್ಲಿ ಏಕತೆಯ ಕೊರತೆ ಎದ್ದು ಕಾಣುತ್ತಿದೆ ಎಂದಿದ್ದಾರೆ. “ನಮ್ಮ ಜನರು ಕುಡಿಯುವ ನೀರಿನ ವಿಚಾರ ಬಂದಾಗ ಕೂಡ ಏಕತೆ ಪ್ರದರ್ಶಿಸುವುದಿಲ್ಲ. ಹೀಗಿರುವಾಗ ಕಂಬಳ ಅಥವಾ ಬೇರೆ ಯಾವುದೇ ಸಾಂಪ್ರದಾಯಿಕ ಪದ್ಧತಿ ವಿಚಾರದಲ್ಲಿ ಅವರು ಒಂದುಗೂಡುತ್ತಾರೆಂದು  ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಕಂಬಳವನ್ನು ನಿಷೇಧಿಸುವುದಾದರೆ, ಪರಿಸರ ಮಾಲಿನ್ಯವುಂಟು ಮಾಡುವ ದೀಪಾವಳಿ ಹಾಗೂ ಹೋಳಿ ಹಬ್ಬಗಳನ್ನೂ ನಿಷೇಧಿಸಬೇಕು. ಕಂಬಳವನ್ನು ನಿಷೇಧಿಸುವುದರಿಂದ ಯಾವುದೇ ಸಮಸ್ಯೆ ಪರಿಹಾರವಾಗದು. ಕನ್ನಡಿಗರು ಒಂದಾಗದೇ ಹೋದರೆ ನಾವು ನಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ನೀರಿನ ವಿಚಾರದಲ್ಲಿ ಏಕತೆ ಪ್ರದರ್ಶಿಸದ ಜನ ಸಂಪ್ರದಾಯದ ವಿಚಾರದಲ್ಲಿ ಒಂದಾಗುವರೇ ?” ಎಂದು ಅವರು ಪ್ರಶ್ನಿಸಿದ್ದಾರೆ.

ನಟಿ ರಾಗಿಣಿ ಕೂಡ ಕಂಬಳ ಕ್ರೀಡೆಯನ್ನು ಬೆಂಬಲಿಸಿದ್ದು “ಕೋಣಗಳನ್ನು ಪ್ರೀತಿಯಿಂದ ಆರೈಕೆ ಮಾಡಿದರೆ, ಈ ಕ್ರೀಡೆ ನಡೆಸಲು ಯಾವುದೇ ಅಡ್ಡಿಯಿರಬಾರದು. ಸಂಪ್ರದಾಯಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಕಾಲಕ್ಕೆ ತಕ್ಕಂತೆ ಅವುಗಳಲ್ಲಿ ಕೆಲ ಬದಲಾವಣೆ ತರಬಹುದು” ಎಂದಿದ್ದಾರೆ.

ಮಂಗಳೂರು ಮೂಲದ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಹೇಳುವಂತೆ “ಕಂಬಳದ ಕೋಣಗಳ ಮಾಲಕರು ತಮ್ಮ ಕಂಬಳಗಳನ್ನು ಮಕ್ಕಳಂತೆಯೇ ಸಲಹುತ್ತಿದ್ದಾರೆ. ಅವುಗಳ ಬಗ್ಗೆ ಅಭಿಮಾನ ಹೊಂದಿದ್ದಾರೆ. ಹಿಗಿರುವಾಗ ಅವುಗಳಿಗೆ ಹಿಂಸೆ ನೀಡುವ ಬಗ್ಗೆ ಅವರು ಯೋಚಿಸಲೂ ಸಾಧ್ಯವಿಲ್ಲ” ಎಂದಿದ್ಧಾರೆ.

ನಟ ಜಗ್ಗೇಶ್ ತಮ್ಮ ಪ್ರತಿಕ್ರಿಯೆಯಲ್ಲಿ “ತಮಿಳುನಾಡಿಗೆ ಜಲ್ಲಿಕಟ್ಟು ಇದ್ದಂತೆ ಕರ್ನಾಟಕಕ್ಕೆ ಕಂಬಳವಿದೆ. ತಮಿಳುನಾಡಿನ ಜನತೆಯೆಂತೆಯೇ ಕಂಬಳದ ವಿಚಾರದಲ್ಲಿ ನಾವು ಏಕತೆ ಪ್ರದರ್ಶಿಸಬೇಕು. ಕಂಬಳವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.