ಕಣ್ಣು ಪರೀಕ್ಷಾ ಶಿಬಿರದಲ್ಲಿ ಹೊಡೆದಾಟ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಸಾರ್ವಜನಿಕ ದಾರಿಗೆ ಅಡ್ಡವಾಗಿ ಶಾಮಿಯಾನ ಹಾಕಿರುವುದನ್ನು ಆಕ್ಷೇಪಿಸಿದ ಸಂದರ್ಭ ಉಂಟಾದ ಮಾತಿನ ಚಕಮಕಿ ಅತಿರೇಕಕ್ಕೆ ಹೋಗಿ ಹೊಡೆದಾಟ ಆರಂಭವಾಗಿ ಕಣ್ಣು ಪರೀಕ್ಷಾ ಶಿಬಿರ ರದ್ದಾದ ಘಟನೆ ಪಡುಬಿದ್ರಿ ಸಮೀಪದ ಬೊಗ್ಗರ್ ಲಚ್ಚಿಲ್ ಎಂಬಲ್ಲಿ ನಡೆದಿದೆ.

ಸ್ಥಳೀಯ ಸಂಸ್ಥೆಯೊಂದು ಇತರ ಸಂಸ್ಥೆಗಳೊಂದಿಗೆ ಸೇರಿಕೊಂಡು ಕಣ್ಣು ಪರೀಕ್ಷಾ ಶಿಬಿರವೊಂದನ್ಮು ಏರ್ಪಾಡಿಸಿತ್ತು, ಆದರೆ ಸ್ಥಳಾವಕಾಶ ಕಡಿಮೆ ಇದ್ದ ಕಾರಣ ಶಿಬಿರಕ್ಕೆ ಶಾಮಿಯಾನವನ್ನು ರಸ್ತೆಯಲ್ಲಿ ಹಾಕಿ ಟೇಬಲ್ ಕುರ್ಚಿಗಳನ್ನು ಇಟ್ಟಿದ್ದರಿಂದ ಸ್ಥಳೀಯರ ಖಾಸಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಾಮಿಯಾನ ಬದಿಗೆ ಸರಿಸುವಂತೆ ಶಾಮಿಯಾನ ಮಾಲಿಕರಿಗೆ ಹಿಂದಿನ ದಿನವೇ ಸ್ಥಳೀಯ ನಿವಾಸಿ ದೂರವಾಣಿ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಅವರ ಮಾತಿಗೆ ಮನ್ನಣೆ ನೀಡದೆ ರಸ್ತೆಯಲ್ಲೇ ಶಾಮಿಯಾನ ಹಾಕಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಪೊಲೀಸರು ಎರಡು ತಂಡಗಳನ್ನೂ ಸಮಾಧಾನ ಪಡಿಸಿ ಪ್ರಕರಣ ತಿಳಿಗೊಳಿಸಿದ್ದಾರೆ. ಆದರೆ ಈ ಘಟನೆಯಿಂದ ಮನನೊಂದ ಸಂಘಟಕರು ಇಂದಿನ ಈ ಕಣ್ಣು ಪರೀಕ್ಷಾ ಶಿಬಿರವನ್ನು ರದ್ದುಗೊಳಿಸಿ ಮುಂದಿನ ದಿನದಲ್ಲಿ ಪಡುಬಿದ್ರಿ ಪರಿಸರದಲ್ಲೇ ಮತ್ತೊಂದು ಶಿಬಿರ ನಡೆಸುವುದಾಗಿ ತಿಳಿಸಿದ್ದಾರೆ.