ಸರ್ಕಾರದಿಂದ ಉತ್ತರ ಸಿಗುವವರೆಗೂ ಎತ್ತಿನಹೊಳೆ ವಿರುದ್ಧ ಹೋರಾಟಕ್ಕೆ ಸಿದ್ಧ

ವಿಜ್ಞಾನಿ ರಾಮಚಂದ್ರ

ನಮ್ಮ ಪ್ರತಿನಿಧಿ ವರದಿ

ಮೂಡಬಿದಿರೆ : “ಅವೈಜ್ಞಾನಿಕವಾಗಿರುವ ಎತ್ತಿನಹೊಳೆ ಯೋಜನೆಗೆ ಸರ್ಕಾರದಿಂದ ಸಮರ್ಪಕ ಉತ್ತರ ಸಿಗುವವರೆಗೂ ಪ್ರಶ್ನಿಸುತ್ತಲೇ ಇರುತ್ತೇನೆ. ಉತ್ತರ ನೀಡದಿದ್ದರೆ ಬೀದಿಗಿಳಿದು ಹೋರಾಡಲೂ ಸಿದ್ಧ” ಎಂದು ಪರಿಸರ ವಿಜ್ಞಾನಿ ಹಾಗೂ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ದ್ವೈವಾರ್ಷಿಕ ಲೇಕ್-ಸಮ್ಮೇಳನ-2016ರ ಅಧ್ಯಕ್ಷ ಟಿ ವಿ ರಾಮಚಂದ್ರ ಗುರುವಾರ ಸರಕಾರಕ್ಕೆ ನೇರ ಸವಾಲು ಹಾಕಿದರು.

`ಎಲ್ಲಿದೆ 24 ಟಿಎಂಸಿ ನೀರು ?’

“ಸರಕಾರಿ ಯೋಜನೆಗಳು ಕಾಂಟ್ರಾಕ್ಟರ್ ಹಾಗೂ ಯೋಜನೆ ರೂಪಿಸುವವರ ಪರವಾಗಿದೆ. ಎತ್ತಿನಹೊಳೆಯಲ್ಲಿರುವುದು 9.5 ಟಿಎಂಸಿ ನೀರು ಮಾತ್ರ. ಸರಕಾರಿ ಅಂಕಿಅಂಶದ ಪ್ರಕಾರ ಎತ್ತಿನಹೊಳೆಯಲ್ಲಿ 24 ಟಿಎಂಸಿ ನೀರಿದೆ, ಅದಕ್ಕೆ ಯಾವ ವೈಜ್ಞಾನಿಕ ಅಧ್ಯಯನದ ವರದಿಯ ಆಧಾರ ಎಂಬುದು ತಿಳಿದಿಲ್ಲ. ಎತ್ತಿನಹೊಳೆಯಲ್ಲಿರುವ 9 ಟಿಎಂಸಿ ನೀರಿನಲ್ಲಿ 6 ಟಿಎಂಸಿ ನೀರು ಕೃಷಿಕಾರ್ಯಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಬಳಕೆಯಾದರೆ 2 ಟಿಎಂಸಿ ನೀರು ಅವಶ್ಯ ಪ್ರೋಟೀನ್ ನೀಡುವ ಜಲಚರಗಳಿಗಾಗಿ ಬಳಕೆಯಾಗುತ್ತಿದೆ. ಇದರಲ್ಲಿ ಉಳಿಯುವುದು 0.85 ಟಿಎಂಸಿ ಮಾತ್ರ. ಹಾಗಿದ್ದರೆ ಎಲ್ಲಿದೆ 24 ಟಿಎಂಸಿ ನೀರು ?” ಎಂದು ಪ್ರಶ್ನಿಸಿದರು.

`ಮೂರ್ಖರಾದ ಕೋಲಾರದ ಜನ’

“ನದಿತಿರುವಿಗಾಗಿ ಹಾಕಿರುವ ಪೈಪಿನಲ್ಲಿ ಕೋಲಾರದ ಜನರಿಗೆ ಪಶ್ಚಿಮ ಘಟ್ಟದ ಆಮ್ಲಜನಕ ಸಿಗಬಹುದೇ ವಿನಃ ಅದರಲ್ಲಿ ನೀರು ಹರಿಯಲು ಸಾಧ್ಯವಿಲ್ಲ. ಯೋಜನೆ ನಿರ್ಮಿಸಿದವರ ಮತ್ತು ಕಾಂಟ್ರಾಕ್ಟರುಗಳ ತಪ್ಪು ಮಾಹಿತಿಯಿಂದಾಗಿ ಕೋಲಾರದ ಜನರು ಮೂರ್ಖರಾಗಿದ್ದಾರೆ. ಆದರೆ ಈಗ ಅದು ಕೋಲಾರದ ಜನರಿಗೆ ಅರ್ಥವಾಗಿದೆ” ಎಂದರು.

`ಬ್ರಿಫ್ ಕೇಸ್ ಇಲ್ಲ’

“ಜನಪರ ಯೋಜನೆಗಾಗಿ ಹೋರಾಡುವ ನಾನು ಯಾರಿಗೂ ಬ್ರಿಫ್ ಕೇಸ್ ನೀಡುವುದಿಲ್ಲ ಮತ್ತು ಯಾರಿಂದಲೂ ಭ್ರಿಪ್ ಕೇಸ್ ತೆಗೆದುಕೊಳ್ಳುವುದಿಲ್ಲ” ಎಂದ ಅವರು, “ಜನರ ಒಳಿತಿಗಾಗಿ ಯೋಚನೆ ಮಾಡುವ ಹಾಗೂ ಅದನ್ನು ಜಾರಿಗೊಳಿಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ನಮ್ಮ ಮುಂದಿನ ಪೀಳಿಗೆಗೆ ಪರಿಶುದ್ಧ ಗಾಳಿ, ನೀರನ್ನು ನೀಡಲು ಸಾಧ್ಯವಾಗದಿದ್ದರೆ  ಅಭಿವೃದ್ಧಿಗೆ ಅರ್ಥವೇ ಇರುವುದಿಲ್ಲ” ಎಂದರು.

ಮಂಗಳೂರು ಉತ್ತರ ಶಾಸಕ ಜಿ ಆರ್ ಲೋಬೊ, “ನಮ್ಮ ಉಳಿವಿಗಾಗಿ ಪರಿಸರದ ಉಳಿವು ಅತ್ಯಂತ ಅವಶ್ಯ. ಅಭಿವೃದ್ಧಿಗಾಗಿ ಸಂಶೋಧನೆ ಮಾಡುತ್ತೆವೆಯೇ ಹೊರತು ಪ್ರಕೃತಿಯ ವರದಾನಗಳನ್ನು ಪುನರ್ ನಿರ್ಮಾಣ ಮಾಡುವುದಿಲ್ಲ. ಮನುಷ್ಯನ ಉಳಿವಿಗಾಗಿ ಪೃಕೃತಿಯನ್ನು ಉಳಿಸುವುದು ಅತ್ಯಂತ ಅಗತ್ಯ” ಎಂದರು.