19ನೇ ದಿನಕ್ಕೆ ತಲಪಿದ ಮದ್ಯದಂಗಡಿ ವಿರುದ್ಧ ಗ್ರಾಮಾಂತರ ಜನರ ಹೋರಾಟ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕುಂಬಳೆ ನಾರಾಯಣಮಂಗಲದಲ್ಲಿ ನಡೆಯುತ್ತಿರುವ ಮದ್ಯವಿರೋಧಿ ಚಳುವಳಿಗೆ ಮದರು ಮಾತೆ ಮೊಗೇರ ಸಮಿತಿಯ ವತಿಯಿಂದ ಪೂರ್ಣ ಬೆಂಬಲವನ್ನು ಸೂಚಿಸಲಾಯಿತು. ನಿಬಿಡ ವಸತಿ ಕೇಂದ್ರಗಳು, ಶಾಲೆ, ಆರಾಧನಾಲಯ, ಕಾಲೇಜು ಸಹಿತ ಸಾರ್ವಜನಿಕ ಪ್ರಮುಖ ಕೇಂದ್ರವಾಗಿರುವ ನಾರಾಯಣ ಮಂಗಲದಲ್ಲಿ ಮದ್ಯದಂಗಡಿ ಸ್ಥಾಪಿಸುವ ಹುನ್ನಾರದ ವಿರುದ್ದ ಜನಪರ ಸಮಿತಿ ಹಮ್ಮಿಕೊಂಡ ನಿರಂತರ ಪ್ರತಿಭಟನೆ ಗುರುವಾರ ಯಶಸ್ವೀ 19ನೇ ದಿನಕ್ಕೆ ಕಾಲಿರಿಸಿದೆ.

ಆದರೆ ಅಧಿಕೃತ ವರ್ಗ ಯಾವೊಂದು ದಿಟ್ಟ ನಿರ್ಧಾರಗಳನ್ನು ತಳೆಯದೆ ಮೌನವಾಗಿರುವುದು ಆಶ್ಚರ್ಯ ಮೂಡಿಸಿದೆ.

ಬಹುಶಃ ಪ್ರತಿಭಟನೆಯ ಕಾವು ತಗ್ಗಿದ ಬಳಿಕ ಮದ್ಯದಂಗಡಿ ಸ್ಥಾಪಿಸಬಹುದೆಂಬ ಹುನ್ನಾರ ಇರಬಹುದೆಂದು ಅಂದಾಜಿಸಲಾಗಿದೆ. ಆದರೆ ಪ್ರತಿಭಟನೆಯ ಕಾವು ದಿನಗಳೆದಂತೆ ಬಲಗೊಳ್ಳುತ್ತಿದ್ದು, ವ್ಯಾಪಕ  ಜನಸ್ಪಂದÀನ ಮೂಡಿಬಂದಿದೆ.  ಗುರುವಾರ ಮದ್ಯದಂಗಡಿ ವಿರೋಧಿ ಕ್ರಿಯಾ ಸಮಿತಿ ಅಧ್ಯಕ್ಷ, ಸಹಿತ ಸ್ಥಳೀಯ ಕಾನ್ಸಾ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದರು.