ಅನ್ಯಾಯದ ವಿರುದ್ಧ ಹೋರಾಟಕ್ಕಿಂತ ಅನ್ಯ ಧರ್ಮವಿಲ್ಲ : ಚಿಂತಕ ತೋಳ್ಪಾಡಿ

 

ಜಂಟೀ ಕ್ರಿಯಾ ಸಮಿತಿ ಆಶ್ರಯದಲ್ಲಿ ಸಮಾಲೋಚನಾ ಸಭೆ

ಗುರುವಾಯನಕೆರೆ : “ಹಿಂದೆ ಪಾಳೆಯಗಾರಿಕೆ ಪದ್ಧತಿ ಇತ್ತು. ಈಗ ಪ್ರಜಾಪ್ರಭುತ್ವ ಇದೆ. ಅನ್ಯಾಯದ ವಿರುದ್ಧ ಯಾಕೆ ಹೋರಾಡಲಿಲ್ಲ ಎಂದು ನಮ್ಮ ಮಕ್ಕಳೇ ನಮ್ಮ ಬಗ್ಗೆ ಕೇಳುವಂತಾಗಬಾರದು. ಅನ್ಯಾಯದ ವಿರುದ್ಧ ಹೋರಾಟಕ್ಕಿಂತ ಬೇರೆ ಧರ್ಮವಿಲ್ಲ. ಸತ್ಯದ ಸಾಮ್ರಾಜ್ಯವನ್ನು ಅನಾವರಣ ಮಾಡಬೇಕು, ಸುಳ್ಳಿನದ್ದಲ್ಲ. ಕೌರವರಲ್ಲಿ 11 ಅಕ್ಷೋಹಿಣಿ ಸೈನ್ಯ ಇದ್ದರೂ 7 ಅಕ್ಷೋಹಿಣಿ ಇದ್ದ ಪಾಂಡವರೇ ಗೆದ್ದದ್ದು. ಹಕ್ಕೊತ್ತಾಯಕ್ಕೆ, ಹೋರಾಟಕ್ಕೆ ನೈತಿಕವಾಗಿ ನನ್ನ ಪೂರ್ತಿ ಬೆಂಬಲ ಇದೆ” ಎಂದು ಖ್ಯಾತ ಚಿಂತಕ, ಸಾಹಿತಿ ಶ್ರೀ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ಗುರುವಾಯನಕೆರೆಯಲ್ಲಿ ಜಂಟಿ ಕ್ರಿಯಾ ಸಮಿತಿ, ಪ್ರಜಾಧಿಕಾರ ವೇದಿಕೆ-ಕರ್ನಾಟಕ ಮತ್ತು ನಾಗರಿಕ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಸಂಯುಕ್ತ ಸಮಾಲೋಚನಾ ಸಭೆಯಲ್ಲಿ ಅವರು ಮಾತಾಡುತ್ತಾ “ಗಾಂಧೀಜಿಯವರು ಹೇಳಿದ ಅತ್ಯಂತ ಮುಖ್ಯವಾದ ಮಾತು “ಆoಟಿ’ಣ ಅooಠಿeಡಿಚಿಣe ತಿiಣh eviಟ- ಕೆಡುಕಿನ ಒಟ್ಟಿಗೆ ಸಹಕರಿಸಬೇಡಿ” ಎಂಬುದನ್ನು ಒತ್ತಿಹೇಳಿದರು.

ವಿಚಾರವಾದಿ ಸಂಘಟನೆಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಡಾ| ನರೇಂದ್ರ ನಾಯಕ್ ಮಾತಾಡುತ್ತಾ “ಹೆಗ್ಗಡೆ ಸಾಮ್ರಾಜ್ಯದ ಮುಖವಾಡ ರಾಷ್ಟ್ರೀಯ ಮಟ್ಟದಲ್ಲಿ ಕಳಚಬೇಕು. ವಿಶ್ವಸಂಸ್ಥೆಯಲ್ಲಿ ಇವರ ನಿಜವಾದ ಮುಖದ ಪ್ರಸ್ತಾಪ ಬರುವಂತೆ ಮಾಡಲಾಗುವುದು” ಎಂದು ಹೇಳಿ ಈ ನಿಟ್ಟಿನಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಬೆಳವಣಿಗೆಯನ್ನು ತಿಳಿಸಿದರು.

ಕರ್ನಾಟಕ ಗ್ರಾಮಾಭಿವೃದ್ಧಿ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ ಉಪಾಧ್ಯಕ್ಷ ಎಸ್ ಕುಮಾರ್ ಮಾತಾಡುತ್ತಾ, “ದೇವರ ಹೆಸರಿನಲ್ಲಿ ಹೆಗ್ಗಡೆಯವರ ಮೈಕ್ರೋಫೈನಾನ್ಸ್ ದುಬಾರಿ ಬಡ್ಡಿ ವಿಧಿಸಿ ರಾಜ್ಯವ್ಯಾಪಿ ಹರಡಿರುವುದರ ಬಗ್ಗೆ ಮತ್ತು ಅಕ್ರಮಗಳ ಬಗ್ಗೆ ಒಕ್ಕೂಟದ ಸದಸ್ಯ ಸಂಸ್ಥೆಗಳಲ್ಲಿ ಚರ್ಚೆ ನಡೆದಿದೆ. ಸದಸ್ಯರಿಗೆ ಈ ಬಡ್ಡಿ ದಂಧೆಯ ಸತ್ಯದ ಅರಿವಾಗುತ್ತಿದ್ದು ಇದನ್ನು ಬಿಡುತ್ತಿದ್ದಾರೆ. ಹೋರಾಟ ತೀವ್ರಗೊಳಿಸಲಾಗುವುದು” ಎಂದರು.

ಧಾರ್ಮಿಕ, ಸಾಮಾಜಿಕ ಮುಖಂಡ ಹಾಜಿ ಅಬ್ದುಲ್ ಲತೀಫ್ ಸಾಹೇಬ್, ಭಾರತೀಯ ಮಜ್ಜೂರ್ ಸಂಘದ ರಾಜ್ಯಾಧ್ಯಕ್ಷ ಕೆ ವಿಶ್ವನಾಥ ಶೆಟ್ಟಿ, ಹೋರಾಟಗಾರ ಐ ಎಲ್ ಪಿಂಟೋ ಮತ್ತಿತರರು ಮಾತಾಡಿ ಶೋಷಣೆಯ ವಿರುದ್ಧ ಈ ಹೋರಾಟದ ಹಕ್ಕೊತ್ತಾಯ ಈಡೇರಿಕೆಗೆ ಪೂರ್ಣ ಬೆಂಬಲ, ಸಹಕಾರ ಪ್ರಕಟಿಸಿದರು.

ಉಡುಪಿಯಲ್ಲಿ ನವೆಂಬರಿನಲ್ಲಿ ನಡೆಯುವ ಧಾರ್ಮಿಕ ಸಂಸದ್ ಸಭೆಗೆ ಆಗಮಿಸುವ ಎಲ್ಲಾ ಸಂತರಿಗೆ, ಸ್ವಾಮೀಜಿಗಳಿಗೆ ವೀರೇಂದ್ರ ಹೆಗ್ಗಡೆ ಸಾಮ್ರಾಜ್ಯಕ್ಕೆ ಸಂಬಂಧಿಸಿ ಸರಕಾರ ಮಾಡಿರುವ ವಿವಿಧ ತನಿಖಾ ಆದೇಶಗಳ, ಅವರ ಮೇಲೆ ದಾಖಲಾದ ಕ್ರಿಮಿನಲ್ ಮತ್ತು ಸಿವಿಲ್ ಕೇಸ್‍ಗಳ ಸಂಕ್ಷಿಪ್ತ ಅಧಿಕೃತ ಮಾಹಿತಿಯ ಕಿರುಪುಸ್ತಕವನ್ನು ಮುಂದಾಗಿ ಹಿಂದಿಭಾಷೆಯಲ್ಲಿ ಕಳಿಸುವುದಾಗಿ ನಿರ್ಧರಿಸಲಾಯ್ತು.

ಟ್ರಸ್ಟಿ ವನಿತಾ ಜೈನ್ ಈವರೆಗಿನ ಬೆಳವಣಿಗೆಗಳ ಮಾಹಿತಿ ಪತ್ರ ಓದಿದರು. ಟ್ರಸ್ಟ್ ಅಧ್ಯಕ್ಷ ಕೆ ಸೋಮನಾಥ ನಾಯಕ್ ಪ್ರಸ್ತಾವನೆ ಮಾಡುತ್ತಾ 5 ವರ್ಷದ ಹಿಂದಿನ ಮತ್ತು ಈಗಿನ ಪರಿಸ್ಥಿತಿಯ ವಿಶ್ಲೇಷಣೆ ಮುಂದಿರಿಸಿದರು. “ಸಮಾಜದಲ್ಲಿ ಈಗ ಭಯದ ವಾತಾವರಣ ಇಲ್ಲ. ಅನ್ಯಾಯವನ್ನು ಬಹಿರಂಗವಾಗಿ ಚರ್ಚಿಸುತ್ತಾರೆ.  `ಅನಾವರಣ’ ಪುಸ್ತಕ ಮತ್ತು ಕರಪತ್ರ ವ್ಯಾಪಕವಾಗಿ ಹಂಚಲಾಗಿದ್ದು ಇದಕ್ಕೆ ಬೇಡಿಕೆ ಏರುತ್ತಿರುವುದೇ ಇದಕ್ಕೆ ಸಾಕ್ಷಿ. ನಮ್ಮ ಮೇಲಿನ ಬಹುತೇಕ ಕೋರ್ಟ್ ಕೇಸುಗಳು ರದ್ದಾಗಿವೆ. ಒಂದು ಮಾನನಷ್ಟ ಮೊಕದ್ದಮೆ ಮತ್ತು ಇದರಲ್ಲಿ ಮಿಸ್ ಕೇಸ್ ಇದ್ದು ಇದನ್ನು ಕಾನೂನು ಪ್ರಕಾರ ಎದುರಿಸಲಾಗುವುದು. ನಾವು ಸರಕಾರಿ ದಾಖಲೆಗಳ ಆಧಾರದಲ್ಲಿ ಸತ್ಯವನ್ನೇ ಹೇಳುತ್ತಾ ಬಂದಿದ್ದೇವೆ. ಕೋರ್ಟಿನಲ್ಲಿ ಯಾರ ಪರ ತೀರ್ಪಾದರೂ ಮೇಲ್ಮನವಿ ಸುಪ್ರೀಂ ಕೋರ್ಟಿನವರೆಗೆ ಇರುತ್ತದೆ. ಜನತಾ ನ್ಯಾಯಾಲಯದಲ್ಲಿ ನಾವು ಮುಖವಾಡವನ್ನು ಕಳಚಲು ಸಾಧ್ಯವಾಗಿದೆ. `ಅನಾವರಣ’ದಲ್ಲಿ ನಾವು ಬಹಿರಂಗ ಚರ್ಚೆಗೆ ಹೆಗ್ಗಡೆಯವರನ್ನು ಮತ್ತು ಅವರ ಬೆಂಬಲಿಗರನ್ನು ಆಹ್ವಾನಿಸಿದ್ದೇವೆ. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾರ್ವಜನಿಕವಾಗಿ ಅತ್ಯುನ್ನತ ಸ್ಥಾನದಲ್ಲಿರುವ, ಧರ್ಮಾಧಿಕಾರಿಯೂ ಪದ್ಮವಿಭೂಷಣರೂ ಆಗಿರುವ ಹೆಗ್ಗಡೆಯವರು ಪಾರದರ್ಶಕವಾಗಿರಬೇಕು, ಅವರ ಮೇಲೆ ಬಂದ ಆರೋಪಗಳಿಗೆ ಸ್ಪಷ್ಟನೆ ನೀಡಬೇಕು ವಿನಃ ಆಧಾರಸಹಿತ ಆರೋಪಿಸಿದವರನ್ನೇ ಹತ್ತಿಕ್ಕುವ ಪ್ರಯತ್ನ ಸರಿಯಲ್ಲ ಇದರಿಂದ ಸತ್ಯ ಸುಳ್ಳಾಗುವುದಿಲ್ಲ” ಎಂದರು.

ಸಮಿತಿಯ ಕಾನೂನು ಸಲಹೆಗಾರ ಭಾಸ್ಕರ ಹೊಳ್ಳ ಮತ್ತು  ಟ್ರಸ್ಟಿ ರಂಜನ್ ರಾವ್ ಯರ್ಡೂರ್ ಹೆಗ್ಗಡೆ ಸಂಸ್ಥೆಗಳ ಮೇಲಿನ 38 ಕೇಸ್‍ಗಳ ಹಾಗೂ ಕಂದಾಯ ಸಚಿವ ಶ್ರೀ ಕಾಗೋಡು ತಿಮ್ಮಪ್ಪರವರು ಹೆಗ್ಗಡೆ ಸಂಸ್ಥೆಗಳ 17 ಕಾನೂನು ಉಲ್ಲಂಘನೆಗಳ ಸಮಗ್ರ ತನಿಖೆಗೆ ಜಿಲ್ಲಾಧಿಕಾರಿಗೆ ನೀಡಿದ ಆದೇಶ ಮತ್ತು ತಾವು ನೀಡಿದ 110 ಅಡಕಗಳ, 314 ಪುಟಗಳ ದಾಖಲೆ ವರದಿಯ ಮಾಹಿತಿ ನೀಡಿದರು.

ಸಭಾಧ್ಯಕ್ಷತೆ ವಹಿಸಿದ ಪ್ರಜಾಧಿಕಾರ ವೇದಿಕೆ-ಕರ್ನಾಟಕದ ರಾಜ್ಯ ಸಂಚಾಲಕ ಶಿವರಾಜೇ ಗೌಡ ಮಾತಾಡಿ “ಪ್ರತಿ ಜಿಲ್ಲೆಯಲ್ಲಿ ಎನ್‍ಜಿಒಗಳ ನೆಟ್‍ವರ್ಕ್‍ಗಳು ಪತ್ರಿಕಾಗೋಷ್ಠಿ ಮಾಡಿ ಹೆಗ್ಗಡೆಯವರ ಕುರಿತ ಸತ್ಯವಿಚಾರ ಪ್ರಚಾರ ಮಾಡಬೇಕು. ಸಾರ್ವಜನಿಕರಿಂದ ಧರ್ಮಸ್ಥಳ ದೇವಸ್ಥಾನಕ್ಕೆ ಬರುವ ನೂರಾರು ಕೋಟಿ ರೂ ಆದಾಯ ಈಗ ಹೆಗ್ಗಡೆಯವರ ಅಧೀನದಲ್ಲಿದೆ. ಇದರ ಲೆಕ್ಕಪತ್ರ ಬಹಿರಂಗ ಮಾಡಬೇಕು. ಧಾರ್ಮಿಕದತ್ತಿ ಕಾಯ್ದೆ ಈ ದೇವಸ್ಥಾನಕ್ಕೂ ಅನ್ವಯವಾಗಿ ಇಲ್ಲಿಯ ಹಣ ಕಾಯ್ದೆ ಪ್ರಕಾರವೇ ವಿನಿಯೋಗವಾಗಬೇಕು. ದೇವಸ್ಥಾನದ ಸಾವಿರಾರು ಎಕ್ರೆ ಭೂಮಿ ಹೆಗ್ಗಡೆ ಕುಟುಂಬಕ್ಕೆ ಕಾನೂನುಬಾಹಿರವಾಗಿ ಮಾಡಿಕೊಂಡಿದ್ದಾರೆ. ಇದನ್ನು ಸರಕಾರ ಸ್ವಾಧೀನಪಡೆದು ದಲಿತರರಿಗೆ, ಬಡವರಿಗೆ ಹಂಚಬೇಕು” ಎಂದರು.

ಆರಂಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ ಎಚ್ ಸ್ವಾಗತಿಸಿದರು. ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪವಾದ) ತಾಲೂಕು ಸಂಚಾಲಕ ಆರ್ ರಮೇಶ್ ವಂದಿಸಿದರು. ವೇದಿಕೆಯಲ್ಲಿ ಕರಾವಳಿ ಮಹಿಳಾ ಜಾಗೃತಿ ವೇದಿಕೆ ಅಧ್ಯಕ್ಷೆ ಮುಮ್ತಾಜ್, ಆದಿವಾಸಿ ಹೋರಾಟಗಾರ ಎಲ್ಯಣ್ಣ ಮಲೆಕುಡಿಯ, ಸಾಮಾಜಿಕ ಕಾರ್ಯಕರ್ತ ಸೋಮಶೇಖರ ದೇವಸ್ಯ, ಕೃಷಿಕರ ವೇದಿಕೆಯ ಬಾಲಕೃಷ್ಣ ನಾಯಕ್ ಉಪಸ್ಥತರಿದ್ದರು. 23 ಸಂಘಟನೆಗಳಿಂದ 55 ಪ್ರತಿನಿಧಿಗಳು ಭಾಗವಹಿಸಿದ್ದರು.ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪವಾದ) ತಾಲೂಕು ಸಂಚಾಲಕ ಆರ್.ರಮೇಶ್ ವಂದಿಸಿದರು. ವೇದಿಕೆಯಲ್ಲಿ ಕರಾವಳಿ ಮಹಿಳಾ ಜಾಗೃತಿ ವೇದಿಕೆ ಅಧ್ಯಕ್ಷೆ ಮುಮ್ತಾಜ್, ಆದಿವಾಸಿ ಹೋರಾಟಗಾರ ಎಲ್ಯಣ್ಣ ಮಲೆಕುಡಿಯ, ಸಾಮಾಜಿಕ ಕಾರ್ಯಕರ್ತ ಸೋಮಶೇಖರ ದೇವಸ್ಯ, ಕೃಷಿಕರ ವೇದಿಕೆಯ ಬಾಲಕೃಷ್ಣ ನಾಯಕ್ ಉಪಸ್ಥತರಿದ್ದರು. 23 ಸಂಘಟನೆಗಳಿಂದ 55 ಪ್ರತಿನಿಧಿಗಳು ಭಾಗವಹಿಸಿದ್ದರು.