ಕಾಳ ಧನದ ವಿರುದ್ಧ ಸಮರಕ್ಕೆ ಹಣದ ಚಲನೆಯನ್ನು ಸ್ಥಗಿತಗೊಳಿಸಬೇಕಿಲ್ಲ

ನೋಟು ಅಮಾನ್ಯೀಕರಣದಿಂದ ಕಪ್ಪುಹಣದ ನಿಯಂತ್ರಣ ಅಸಾಧ್ಯ. ಇದೇ ಪರಿಸ್ಥಿತಿ ಇನ್ನೂ ಒಂದು ತಿಂಗಳ ಕಾಲ ಮುಂದುವರೆದರೆ ಆರ್ಥಿಕತೆಗೆ ಬಲವಾದ ಪೆಟ್ಟು ಬೀಳುವುದೇ ಅಲ್ಲದೆ ರಾಜಕೀಯವಾಗಿಯೂ ಪ್ರತಿಕೂಲ ಪರಿಸ್ಥಿತಿ ಉಂಟಾಗಬಹುದು.

  • ಅರುಣ್ ಕುಮಾರ್

ಕಪ್ಪು ಹಣದ ವಿರುದ್ಧ ಸಮರ ಸಾರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಮೌಲ್ಯದ ನೋಟುಗಳನ್ನು ರದ್ದುಪಡಿಸಿದ್ದರೂ ಸಹ ಇದರಿಂದ ನಿರೀಕ್ಷಿತ ಫಲ ದೊರೆತಿಲ್ಲ. ಇದರಿಂದ ಕಪ್ಪು ಹಣ ನಿಯಂತ್ರಣ ಸಾಧ್ಯವೂ ಇಲ್ಲ ಎಂದು ಹಲವಾರು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉನ್ನತ ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸುವುದರಿಂದ ಪರ್ಯಾಯ ಆರ್ಥಿಕ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂದು ಪ್ರತಿಪಾದಿಸುವವರು ಕರಾಳ ಅರ್ಥವ್ಯವಸ್ಥೆ ನಗದು ರೂಪದಲ್ಲಿ ಪ್ರವಹಿಸುತ್ತದೆ ಎಂದು ಭಾವಿಸುತ್ತಾರೆ. ಆದರೆ ಇದು ಅರ್ಧಸತ್ಯ ಮಾತ್ರ. ಸರ್ಕಾರದ ಈ ಕ್ರಮದಿಂದ ಆರ್ಥಿಕ ಪ್ರಗತಿಯ ಪ್ರಮಾಣ ಶೇ 2ರಷ್ಟು ಕುಸಿಯುತ್ತದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಆದರೆ ಈ ಪ್ರತಿಪಾದನೆಯನ್ನು ನಿರಾಕರಿಸಿರುವ ಆಳುವ ಪಕ್ಷದ ವಕ್ತಾರರು ದೀರ್ಘ ಕಾಲಾವಧಿಯಲ್ಲಿ ಇದರಿಂದ ಜನತೆಗೆ ಹೆಚ್ಚು ಉಪಯೋಗವಾಗುತ್ತದೆ ಎಂದು ಹೇಳುತ್ತಿದ್ದಾರೆ.

ಪ್ರಗತಿಯ ಪಥದಲ್ಲಿ ವೇಗದಿಂದ ಸಾಗುತ್ತಿದ್ದ ಅರ್ಥವ್ಯವಸ್ಥೆಗೆ ತಾತ್ಕಾಲಿಕ ಕಡಿವಾಣ ಹಾಕುವ ಅಗತ್ಯವೇನಿತ್ತು ? ವಾಸ್ತವ ಎಂದರೆ ಇಲ್ಲಿ ರಾಜಕೀಯ ಕಾರಣಗಳೇ ಪ್ರಧಾನವಾಗಿವೆ.

ಆಧುನಿಕ ಅರ್ಥವ್ಯವಸ್ಥೆಯಲ್ಲಿ ಹಣವನ್ನು ಆದಾಯದ ರೂಪದಲ್ಲಿ ಹರಿಸಲಾಗುತ್ತದೆ. ಜನರ ಜೀವನ ನಿರ್ವಹಣೆಗೆ ಇದು ನೆರವಾಗುತ್ತದೆ. ಹಣ ಎಂದರೆ ನಗದು ಮಾತ್ರವಲ್ಲ. ಚೆಕ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ವಿದ್ಯುನ್ಮಾನ ಮಾಧ್ಯಮಗಳ ಮೂಲಕವೂ ಹಣ ಹರಿಯುತ್ತದೆ.  ಈ ಇತರ ಹಣದ ಮಾಧ್ಯಮಗಳಿಗೆ ಆಧಾರ ಕೇಂದ್ರ ಬ್ಯಾಂಕ್ ಚಲಾವಣೆ ಮಾಡುವ ಕರೆನ್ಸಿ ಆಗಿರುತ್ತದೆ. ಹಾಗಾಗಿ ಕರೆನ್ಸಿ ಕೊರತೆ ಎಂದರೆ ವಿನಿಮಯ ಸಾಧನದ ಕೊರತೆ ಹೆಚ್ಚಾಗಿದೆ ಮತ್ತು ಇದರಿಂದ ಅರ್ಥವ್ಯವಸ್ಥೆಯಲ್ಲಿನ ಉತ್ಪಾದನೆ ಮತ್ತು ವಿತರಣೆ ಬಾಧಿತವಾಗುತ್ತದೆ ಎಂದೇ ಅರ್ಥ. ಶ್ರೀಮಂತ ಮತ್ತು ಮಧ್ಯಮ ವರ್ಗದವರು ಇತರ ಹಣದ ಮಾಧ್ಯಮಗಳನ್ನು ಬಳಸುತ್ತಾರಾದರೂ, ಬ್ಯಾಂಕ್ ಖಾತೆಗಳನ್ನೇ ಹೊಂದಿರದ ಅನಕ್ಷರಸ್ಥರು, ಅಸಂಘಟಿತ ಕಾರ್ಮಿಕರು ಅಷ್ಟು ಅದೃಷ್ಟವಂತರಾಗಿರುವುದಿಲ್ಲ.  ಇವರಿಗೆ ನಗದು ಕೊರತೆ ಹೆಚ್ಚು ಸಂಕಷ್ಟ ಸೃಷ್ಟಿಸುತ್ತದೆ.

ಅಮೆರಿಕದಲ್ಲಿ ಕಳೆದ ಐವತ್ತು ವರ್ಷಗಳಿಂದ ಕಾರ್ಡ್ ಬಳಕೆ ವ್ಯಾಪಕವಾಗಿದ್ದರೂ ಇಂದಿಗೂ ನಗದು ಬಳಕೆ ಮುಂದುವರೆದಿದೆ. ಇದು ಅಭ್ಯಾಸಕ್ಕೆ ಸಂಬಂಧಿಸಿದ ವಿಚಾರ. ಅಮೆರಿಕದಲ್ಲಿ ಎಷ್ಟೇ ಪ್ಲಾಸ್ಟಿಕ್ ನಗದು ಬಳಸಿದರೂ, ನಗದು ಕಡಿಮೆಯಾಗಿದ್ದರೂ ಕಾಳಧನದ ಪ್ರಮಾಣ ಕಡಿಮೆಯಾಗಿಲ್ಲ. ನಗದು ಮತ್ತು ಕಪ್ಪು ಹಣದ ನಡುವೆ ಸಂಬಂಧ ಕಲ್ಪಿಸುವುದೇ ಮೂರ್ಖತನ. ಹಣದ ಸರಬರಾಜು ಕಡಿಮೆಯಾಗಿದ್ದಲ್ಲಿ ಚಿನ್ನವನ್ನು ಬಳಸಬಹುದು. ವಿದೇಶಿ ವಿನಿಮಯದಲ್ಲಿ ಹಣ ಸಂಗ್ರಹಿಸಬಹುದು. ಹಾಗಾಗಿ ಅಮಾನ್ಯೀಕರಣದ ನಂತರ ಭಾರತದಲ್ಲಿ ಚಿನ್ನ ಮತ್ತು ವಿದೇಶಿ ವಿನಿಮಯಕ್ಕೆ ಬೇಡಿಕೆ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಹಾಗಾಗಿ ನಗದುರಹಿತ ಆರ್ಥಿಕ ವ್ಯವಸ್ಥೆಯಲ್ಲಿ ಕರಾಳ ಧನ ಮತ್ತೊಂದು ರೂಪದಲ್ಲಿ ವ್ಯಕ್ತವಾಗುತ್ತದೆ. ಹೊಸದಾಗಿ ಚಾಲ್ತಿಗೆ ಬರುವ ನಗದು ಸಹ ಕರಾಳ ದಂಧೆಯ ಮೂಲವಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.

ಬ್ಯಾಂಕಿಂಗ್ ವಾಹಿನಿಗಳು, ಷೇರು ಮಾರುಕಟ್ಟೆ, ಅನೌಪಚಾರಿಕ ಹಣದ ಮಾರುಕಟ್ಟೆ, ಹವಾಲ ಮತ್ತು ಬಂಡವಾಳದ ಪಲಾಯನ ಇವೆಲ್ಲವೂ ಸಹ ಕಪ್ಪುಹಣದ ಚಲಾವಣೆಯ ಮೂಲಗಳಾಗುತ್ತವೆ. ಇವುಗಳಲ್ಲಿ ಕೆಲವು ಇನ್ನೂ ಹೆಚ್ಚು ಸಕ್ರಿಯವಾಗುತ್ತವೆ. ಇದರಿಂದ ಅರ್ಥವ್ಯವಸ್ಥೆಯಲ್ಲಿ ಉಳಿತಾಯದ ಪ್ರಮಾಣ ಕಡಿಮೆಯಾಗುತ್ತದೆ. ಬ್ಯಾಂಕಿನಲ್ಲಿ ಜನಸಾಮಾನ್ಯರು ಹೂಡುವ ಹಣದಿಂದ ಬ್ಯಾಂಕುಗಳ ಠೇವಣಿ ಹೆಚ್ಚಾಗುತ್ತದೆ. ಆದರೆ ಈ ಹಳೆಯ ನೋಟುಗಳನ್ನು ಆರ್‍ಬಿಐಗೆ ರವಾನಿಸಿ ಭಸ್ಮ ಮಾಡಲಾಗುತ್ತದೆ. ಆರ್‍ಬಿಐ ಬ್ಯಾಂಕುಗಳಿಗೆ ರವಾನಿಸುವ ನಗದು ಅದರ ಹೊರೆಯಾಗುತ್ತದೆ. ಅಮಾನ್ಯೀಕರಣದ ನಂತರ ಆರ್ಬಿಐ ಹೊರೆ ಕಡಿಮೆಯಾಗಿದೆ. ಆದರೆ ಆಸ್ತಿ ಹೆಚ್ಚಾಗುತ್ತಲೇ ಇದೆ. ಈ ಹೆಚ್ಚುವರಿ ಆಸ್ತಿಯನ್ನು ಆರ್ಬಿಐ ಮತ್ತು ಸರ್ಕಾರ ಬಡಜನತೆಯ ಉದ್ಧಾರಕ್ಕಾಗಿ ಬಳಸಲು ಸಾಧ್ಯವೇ ? ಮತ್ತೊಂದೆಡೆ  ತಮ್ಮ ಬ್ಯಾಂಕ್ ಖಾತೆಯಿಂದ ಪಡೆದ ಹಣವನ್ನು ಮನೆಯಲ್ಲೇ ಸಂಗ್ರಹಿಸುತ್ತಿರುವ ಜನರು ಮತ್ತಷ್ಟು ಹಣ ಪಡೆಯಲು ಬ್ಯಾಂಕುಗಳಿಗೆ ಮುತ್ತಿಗೆ ಹಾಕುತ್ತಾರೆ. ಈ ನಗದು ಹಣವನ್ನು ಆರ್ಬಿಐ  ಬ್ಯಾಂಕುಗಳಿಗೆ ಸರಬರಾಜು ಮಾಡಲೇಬೇಕಾಗುತ್ತದೆ.  ಇಲ್ಲವಾದಲ್ಲಿ ನಗದು ಕೊರತೆ ಇನ್ನೂ ಮುಂದುವರೆಯುತ್ತದೆ.  ಈ ಎಲ್ಲಾ ದೃಷ್ಟಿಕೋನಗಳಿಂದ ನೋಡಿದಾಗ ನೋಟು ಅಮಾನ್ಯೀಕರಣದಿಂದ ಕಪ್ಪುಹಣದ ನಿಯಂತ್ರಣ ಅಸಾಧ್ಯ ಎಂದು ಸ್ಪಷ್ಟವಾಗಿ ಹೇಳಬಹುದು. ಇದೇ ಪರಿಸ್ಥಿತಿ ಇನ್ನೂ ಒಂದು ತಿಂಗಳ ಕಾಲ ಮುಂದುವರೆದರೆ ಆರ್ಥಿಕತೆಗೆ ಬಲವಾದ ಪೆಟ್ಟು ಬೀಳುವುದೇ ಅಲ್ಲದೆ ರಾಜಕೀಯವಾಗಿಯೂ ಪ್ರತಿಕೂಲ ಪರಿಸ್ಥಿತಿ ಉಂಟಾಗಬಹುದು.