ಫಿಡೆಲ್ ಕ್ಯಾಸ್ಟ್ರೋ ವಿಶ್ವಕ್ಕೇ ಸ್ಪೂರ್ತಿ

ತನ್ನ ಜನರಿಗೆ ಉಚಿತ ಆರೋಗ್ಯ ಸೇವೆ ಉಚಿತ ವಸತಿ, ಉಚಿತ ಶಿಕ್ಷಣ ನೀಡಿದ ಕ್ಯಾಸ್ಟ್ರೋ ಸರ್ವಾಧಿಕಾರದಿಂದ ಆಳಿದರೂ ಜನಸಾಮಾನ್ಯರ ಜನಪ್ರಿಯ ನಾಯಕರಾಗಿದ್ದರು.

ಗತ ಕಾಲದ ಜಗತ್ತಿನ ಎಲ್ಲಾ ಕ್ರಾಂತಿಕಾರಿ ನಾಯಕರಿಗೆ ಹೋಲಿಸಿದಾಗ ತಮ್ಮ 90ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಕ್ಯೂಬಾದ ಅಪ್ರತಿಮ ನಾಯಕ ಫಿಡೆÀಲ್ ಕ್ಯಾಸ್ಟ್ರೋ ವಿಶಿಷ್ಟ ಸ್ಥಾನ ಪಡೆಯುತ್ತಾರೆ.  ಲ್ಯಾಟಿನ್ ಅಮೆರಿಕ ಮತ್ತು ವಿಶ್ವದ ಇತರ ರಾಷ್ಟ್ರಗಳ ಕೋಟ್ಯಂತರ ಜನರÀ ಮೇಲೆ ತಮ್ಮ ಪ್ರಭಾವ ಬೀರಿದ್ದ ಕ್ಯಾಸ್ಟ್ರೋ ಹಲವು ಪೀಳಿಗೆಗಳಿಗೆ ಹೋರಾಟದ ಮತ್ತು ಜೀವನದ ಸ್ಫೂರ್ತಿಯಾಗಿದ್ದಾರೆ.

1959ರಲ್ಲಿ ಸರ್ವಾಧಿಕಾರಿ ಫುಲ್ಗೆನಿಸಿಯೋ ಬಾಟಿಸ್ಟಾನನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದ ಕ್ಯಾಸ್ಟ್ರೋ  ದಕ್ಷಿಣ ಖಂಡದಲ್ಲಿ ಅಮೆರಿಕಕ್ಕೆ ಆರು ದಶಕಗಳ ಕಾಲ ಸೆಡ್ಡು ಹೊಡೆದು ಆಡಳಿತ ನಡೆಸಿದವರು. ಅಮೆರಿಕದ ನವ ವಸಾಹತುಶಾಹಿ ಧೋರಣೆಯನ್ನು ವಿರೋಧಿಸಿ ಒಂದು ಕ್ರಾಂತಿಕಾರಿ ಪರಿವರ್ತನೆಯನ್ನು ಕ್ಯೂಬಾದಲ್ಲಿ ತಂದಿರುವ ಕೀರ್ತಿ ಕ್ಯಾಸ್ಟ್ರೋಗೆ ಸಲ್ಲುತ್ತದೆ.

ಫಿಡೆಲ್ ಎಂದೇ ಪ್ರಖ್ಯಾತರಾಗಿದ್ದ ಕ್ಯಾಸ್ಟ್ರೋ ಕ್ಯೂಬಾದ ಮೇಲೆ ನಡೆಸಿದ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಅಮೆರಿಕದ ಸಾಮ್ರಾಜ್ಯಶಾಹಿ ನೀತಿಯನ್ನು ಕೊನೆಯವರೆಗೂ ಕ್ಷಮಿಸಿರಲಿಲ್ಲ.  88 ವರ್ಷಗಳಲ್ಲಿ ಪ್ರಪ್ರಥಮ ಕರಿಯ ನಾಯಕರಾಗಿ ಅಮೆರಿಕದ ಅಧ್ಯಕ್ಷ ಪದವಿ ಅಲಂಕರಿಸಿದ ಒಬಾಮಾ ಅವರ ಸ್ನೇಹ ಹಸ್ತಕ್ಕೂ ಮಣಿಯದ ಕ್ಯಾಸ್ಟ್ರೋ ಕ್ಯೂಬಾ ಅಮೆರಿಕದಿಂದ ಏನನ್ನೂ ಪಡೆಯುವುದಿಲ್ಲ ಎಂದು ಹೇಳುವ ದಿಟ್ಟತನ ತೋರಿದ್ದರು.

11 ದಶಲಕ್ಷ ಜನಸಂಖ್ಯೆ ಹೊಂದಿದ್ದ ಕ್ಯಾರಿಬಿಯನ್ ದ್ವೀಪ ಕ್ಯೂಬಾದಲ್ಲಿ ಫಿಡೆಲ್ ಒಬ್ಬ ಅಪ್ರತಿಮ ನಾಯಕರಾಗಿ ರಾಜ್ಯಭಾರ ನಡೆಸಿದ್ದರು. 1961ರಲ್ಲಿ ಅಮೆರಿಕ ಬೇ ಆಫ್ ಪಿಗ್ಸ್‍ನಲ್ಲಿ ನಡೆಸಿದ ದುಸ್ಸಾಹಸದ ನಂತರವೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡ ಕ್ಯೂಬಾ ಸೋವಿಯಟ್ ಸಂಘದಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಆಮದು ಮಾಡಿಕೊಳ್ಳುವ ಮೂಲಕ ವಿಶ್ವದಾದ್ಯಂತ ತಲ್ಲಣ ಮೂಡಿಸಿತ್ತು.

ಚೆ ಗುವಾರ ಮತ್ತು ಮಿಲಿಯಾಂತರ ಜನಸಾಮಾನ್ಯರ ಬೆಂಬಲ ಹೊಂದಿದ್ದ ಕ್ಯಾಸ್ಟ್ರೋ ಜನಸಾಮಾನ್ಯರ ಪಾಲಿಗೆ ಒಬ್ಬ ಸಮರ್ಥ ಗೆರಿಲ್ಲಾ ಹೋರಾಟಗಾರರಾಗಿದ್ದರು. ಕಮ್ಯುನಿಸ್ಟ್ ಸಿದ್ಧಾಂತವನ್ನೇ ಸ್ವೀಕರಿಸಿದರೂ ಸೋವಿಯಟ್ ಮಾದರಿಯನ್ನು ಅನುಸರಿಸದ ಕ್ಯಾಸ್ಟ್ರೋ ಅನಿವಾರ್ಯವಾಗಿ ಸೋವಿಯತ್ ಬೆಂಬಲವನ್ನು ಪಡೆದಿದ್ದರು.

ತನ್ನ ಜನರಿಗೆ ಉಚಿತ ಆರೋಗ್ಯ ಸೇವೆ ಉಚಿತ ವಸತಿ, ಉಚಿತ ಶಿಕ್ಷಣ ನೀಡಿದ ಕ್ಯಾಸ್ಟ್ರೋ ಸರ್ವಾಧಿಕಾರದಿಂದ ಆಳಿದರೂ ಜನಸಾಮಾನ್ಯರ ಜನಪ್ರಿಯ ನಾಯಕರಾಗಿದ್ದರು. ಆಫ್ರಿಕಾ ಖಂಡದ ಮೇಲೆ ಆಕ್ರಮಣ ನಡೆದಾಗ ಅಲ್ಲಿನ ಜನರನ್ನು ರಕ್ಷಿಸಲು ತಮ್ಮ ಸೈನ್ಯವನ್ನೂ ಕ್ಯಾಸ್ಟ್ರೋ ಕಳುಹಿಸಿದ್ದರು.

ಐವತ್ತು ವರ್ಷಗಳ ಕಾಲ ತಮ್ಮ ನೆತ್ತಿಯ ಮೇಲೆ ಅಮೆರಿಕದ ತೂಗುಗತ್ತಿ ನೇತಾಡುತ್ತಿದ್ದರೂ ದಿಕ್ಕುಗೆಡದೆ ದಿಟ್ಟತನದಿಂದ ಬದುಕಿದ ಫಿಡೆಲ್ ಸೋವಿಯತ್ ಪತನದ ನಂತರ ಉಂಟಾದ ಆರ್ಥಿಕ ಸಂಕಷ್ಟದಿಂದ ತೀವ್ರ ಹಿನ್ನಡೆ ಅನುಭವಿಸಿದ್ದರು.  ಬಿಕ್ಕಟ್ಟು ಮುಗಿಯುವವರೆಗೂ ಅಮೆರಿಕದ ಡಾಲರಿಗೆ ಮಾನ್ಯತೆ ನೀಡದೇ ಫಿಡೆಲ್ ತಮ್ಮ ದೇಶದ ಜನಸಾಮಾನ್ಯರನ್ನು ರಕ್ಷಿಸಿದ್ದರು. 2006ರಲ್ಲಿ ತೀವ್ರ ಅಸ್ವಸ್ಥರಾದ ಅವರು ಎರಡು ವರ್ಷಗಳ ನಂತರ ತಮ್ಮ ಸೋದರ ರೌಲ್ ಕ್ಯಾಸ್ಟ್ರೋಗೆ ಅಧಿಕಾರ ಹಸ್ತಾಂತರ ಮಾಡಿದ್ದರು.

ತಮ್ಮ ದೇಶವನ್ನು ನವ ವಸಾಹತುಶಾಹಿಯ ಕಬಂಧ ಬಾಹುಗಳಿಂದ ವಿಮುಕ್ತಗೊಳಿಸಲು ಶತಪ್ರಯತ್ನ ಮಾಡಿದ ಫಿಡೆಲ್ ತಮ್ಮ ಕನಸನ್ನು ನನಸಾಗಿಸುವುದರಲ್ಲಿ ಯಶಸ್ವಿಯೂ ಆಗಿದ್ದರು. ಅಮೆರಿಕದ ಅಧಿಪತ್ಯ ರಾಜಕಾರಣ ಪರಾಕಾಷ್ಠೆ ತಲುಪಿದ್ದ ಸಂದರ್ಭದಲ್ಲೂ ಎದೆಗುಂದದೆ ತಮ್ಮ ದೇಶವನ್ನು ಸಂರಕ್ಷಿಸಿದ ಅವರು, ತಮ್ಮ ಅಂತಿಮ ಉಸಿರು ಇರುವವರೆಗೂ ಅಮೆರಿಕಕ್ಕೆ ಸೆಡ್ಡು ಹೊಡೆದು ಬಾಳಿದ್ದರು.

ಭಾರತದ ಪ್ರಧಾನಿ ನೆಹರೂ ಅವರ ಪ್ರೇರಣೆಯಿಂದ ರೂಪುಗೊಂಡ ಅಲಿಪ್ತ ನೀತಿ ವ್ಯಾಪಕವಾಗಿ ಸಫಲತೆ ಪಡೆದ ಸಂದರ್ಭದಲ್ಲಿ ಕ್ಯಾಸ್ಟ್ರೋ, ಯುಗೋಸ್ಲೋವಿಯಾದ ಮಾರ್ಷಲ್ ಟಿಟೋ ಅವರೊಡನೆ ಕೈಜೋಡಿಸಿದ ಯುಗೋಸ್ಲೋವಿಯಾದ ವಿಮುಕ್ತಿಗಾಗಿ ಹೋರಾಡಿದ್ದರು. ಇಡೀ ವಿಶ್ವ ಎರಡು ಬಣಗಳಾಗಿ ವಿಭಜಿತವಾಗಿದ್ದ ಸಂದರ್ಭದಲ್ಲಿ ಅಲಿಪ್ತ ರಾಷ್ಟ್ರ ಚಳುವಳಿ ತೃತೀಯ ವಿಶ್ವದ ದೇಶಗಳಿಗೆ ಪ್ರೇರಕ ಶಕ್ತಿಯಾಗಿ ಪರಿಣಮಿಸಿತ್ತು. ಈ ಹಂತದಲ್ಲಿ ನೆಹರೂ ಅವರೊಡನೆ ಕೈಜೋಡಿಸಿದ್ದ ಫಿಡೆಲ್ ಅಲಿಪ್ತ ರಾಷ್ಟ್ರಗಳಿಗೆ ಕಾಯಕಲ್ಪ ಒದಗಿಸುವಲ್ಲಿ ಂiÀiಶಸ್ವಿಯಾಗಿದ್ದರು.

ತಮ್ಮ ದೇಶಕ್ಕೆ ಅವರು ನೀಡಿದ ಅಸಾಧಾರಣ ಕೊಡುಗೆ ಎಂದರೆ  ಅಮೆರಿಕದಿಂದ ಕ್ಯೋಬಾಗೆ ಸ್ವಾತಂತ್ರ್ಯ ಮತ್ತು ವಿಮುಕ್ತಿ ದೊರಕಿಸಿದ್ದು ಮತ್ತು ತಮ್ಮ ಪುಟ್ಟ ರಾಷ್ಟ್ರದ ಜನತೆಗೆ ಉಜ್ವಲ ಭವಿಷ್ಯವನ್ನು ರೂಪಿಸಿದ್ದು. ಜನತೆ ಅನುಭವಿಸಿದ ಸುಖಕ್ಕೆ ಪ್ರತಿಯಾಗಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರೂ  ಇದು ರಾಜಕೀಯ ಅನಿವಾರ್ಯತೆಯಾಗಿತ್ತು ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಫಿಡೆಲ್ ಅವರ ವ್ಯಕ್ತಿತ್ವದ ಸುತ್ತಲಿನ ಪ್ರಭಾವಳಿ ಅವರ ಮಹಾನತೆಯನ್ನು ಮಸುಕು ಮಾಡುವುದಿಲ್ಲ. ಇಡೀ ರಾತ್ರಿ ಭಾಷಣ ಮಾಡುವ ಸಾಮಥ್ರ್ಯ ಹೊಂದಿದ್ದ ಅವರ ವಾದ ಪ್ರತಿವಾದದಲ್ಲಿ ಅಪ್ರತಿಮ ಕೌಶಲ್ಯ ಹೊಂದಿದ್ದರು.

ಅಮೆರಿಕದಲ್ಲಿ ಸಾಕಷ್ಟು ಅಧ್ಯಕ್ಷರು ಆಗಿ ಹೋದರೂ ಫಿಡೆಲ್ ಎದೆಗುಂದದೆ ತಮ್ಮ ದೇಶದ ಅಭಿವೃದ್ಧಿಯ ಪಥದಲ್ಲಿ ಸಕ್ರಿಯರಾಗಿದ್ದರು. ಹಲವಾರು ರೀತಿಗಳಲ್ಲಿ ಫಿಡೆಲ್  ಒಬ್ಬ ಅಸಾಧಾರಣ ನಾಯಕರಾಗಿ ಕಾಣುತ್ತಾರೆ. ಹಾಗಾಗಿಯೇ ಅವರು ಜಗತ್ತಿನ ಇತಿಹಾಸದ ಮೇಲೆ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.