ವುಡ್-ಬಿ ನನ್ನ ಇ-ಮೇಲ್ ಚೆಕ್ ಮಾಡುತ್ತಿರುತ್ತಾಳೆ

ಪ್ರ : ನನಗೀಗ ಮದುವೆ ನಿಶ್ಚಯವಾಗಿದೆ. ಅವಳು ನೈಸ್ ಗರ್ಲ್. ಎರಡು ತಿಂಗಳಲ್ಲಿ ಮದುವೆ ಡೇಟ್ ಇದೆ. ಇಬ್ಬರೂ ಜೊತೆಯಲ್ಲಿಯೇ ಸಂಜೆ ಕಳೆಯುತ್ತೇವೆ. ನಮ್ಮಿಬ್ಬರ ಮನೆಯೂ ಇದೇ ಊರಿನಲ್ಲಿರುವುದರಿಂದ ಅವಳು ನಮ್ಮ ಮನೆಗೂ ಬರುತ್ತಿರುತ್ತಾಳೆ. ನಾನೂ ಅವಳಿದ್ದಲ್ಲಿಗೆ ಹೋಗುತ್ತಿರುತ್ತೇನೆ. ನನ್ನ ಅಪ್ಪ, ಅಮ್ಮನಿಗಂತೂ ಎಷ್ಟು ಬೇಗೆ ಸೊಸೆಯನ್ನು ಮನೆ ತುಂಬಿಸಿಕೊಳ್ಳುವುದು ಅನ್ನುವ ಕಾತರದಲ್ಲಿ ಇದ್ದಾರೆ. ಅವಳೂ ಅವರ ಜೊತೆಗೆಲ್ಲಾ ಚೆನ್ನಾಗಿಯೇ ಇದ್ದಾಳೆ. ಅವಳು ಒಳ್ಳೆಯ ಹೆಂಡತಿ, ಈ ಮನೆಗೆ ಸರಿಹೊಂದುವ ಸೊಸೆಯಾಗುತ್ತಾಳೆ ಅನ್ನುವುದರಲ್ಲಿ ಅನುಮಾನವಿಲ್ಲ. ನಮ್ಮಿಬ್ಬರ ನಡುವಿನ ಕೆಮಿಸ್ಟ್ರಿಯೂ ಚೆನ್ನಾಗಿದೆ. ಆದರೆ ಅವಳ ಒಂದೇ ಗುಣ ನನಗಿಷ್ಟವಾಗದ್ದು ಅಂದರೆ ನನ್ನ ಮೊಬೈಲನ್ನು ಆಗಾಗ ತೆಗೆದುಕೊಂಡು ಮೆಸೇಜಸ್‍ಗಳನ್ನೆಲ್ಲ ಓದುತ್ತಿರುವುದು. ನಮ್ಮ ಮನೆಗೆ ಬಂದರೂ ಅಷ್ಟೇ. ನನ್ನ ಲ್ಯಾಪ್‍ಟಾಪ್ ತೆಗೆದುಕೊಂಡು ಎಲ್ಲವನ್ನೂ ಚೆಕ್ ಮಾಡುತ್ತಾಳೆ. ನನ್ನ ಇ-ಮೇಲ್ ಪಾಸ್‍ವರ್ಡ್ ಸಹ ಕೇಳಿ ತಿಳಿದುಕೊಂಡು ನನ್ನ ಇನ್-ಬಾಕ್ಸ್, ಸೆಂಟ್ ಐಟೆಮ್ಸ್ ಎಲ್ಲವನ್ನೂ ನೋಡುತ್ತಾಳೆ. ಅವಳ ಆ ಗುಣ ನನಗೆ ಕೆಲವೊಮ್ಮೆ ಇರಿಟೇಟ್ ಆಗುತ್ತದೆ. ಅವಳಲ್ಲದೇ ನನ್ನ ಜೀವನದಲ್ಲಿ ಬೇರೆ ಯಾರೂ ಇಲ್ಲದಿರುವುದರಿಂದ ನನಗೇನೂ ಅವಳಿಂದ ಮುಚ್ಚಿಡುವ ವಿಷಯಗಳಿಲ್ಲ. ಆದರೂ ಅವಳು ಪದೇಪದೇ ಚೆಕ್ ಮಾಡುವುದು ನನಗಿಷ್ಟವಾಗುತ್ತಿಲ್ಲ. ನನ್ನ ಮೇಲೆ ಅಷ್ಟೊಂದು ಅನುಮಾನ ಪಡುವುದು ಸರೀನಾ? ಅಥವಾ ನಾನೇ ಓವರ್ ರಿಯಾಕ್ಟ್ ಮಾಡುತ್ತಿರುವೆನಾ?

ಉ : ಕೆಲವರಿಗೆ ಕೆಟ್ಟ ಕುತೂಹಲ. ಪ್ರತಿಯೊಂದರಲ್ಲೂ ತಲೆತೂರಿಸುವ ವಿಚಿತ್ರ ಚಟ. ಅವಳು ನಿಮ್ಮ ಬಾಳಸಂಗಾತಿಯಾಗುವುದರಿಂದ ನಿಮ್ಮೆಲ್ಲ ವಿಷಯಗಳು ಅವಳಿಗೆ ಗೊತ್ತಿರಬೇಕಾಗಿರುವುದು ನಿಜವಾದರೂ ನಿಮಗೂ ಸ್ವಲ್ಪ ಪ್ರೈವೆಸಿ ಬೇಕಾಗುತ್ತದೆ. ಎಲ್ಲೋ ಅಪರೂಪಕ್ಕೊಮ್ಮೆ ಕ್ಯಾಶುವಲ್ಲಾಗಿ ನಿಮಗೆ ಬಂದ ಮೆಸೇಜ್, ಇ-ಮೇಲ್ ಕಡೆ ಗಮನಹರಿಸಿದರೆ ಓಕೆ. ಆದರೆ ಪದೇಪದೇ ಚೆಕ್ ಮಾಡುವುದು ಅತಿಯಾಯಿತು. ಅವಳಲ್ಲಿ ಯಾವುದೋ ತರದ ಅಸುರಕ್ಷತೆ ಬಾಧಿಸುತ್ತಿರುವುದರಿಂದಲೇ ಅವಳು ಆ ರೀತಿ ವರ್ತಿಸುತ್ತಿದ್ದಾಳೆ. ಇದೇ ಮುಂದುವರಿದರೆ ಮುಂದೆ ನಿಮ್ಮ ಯಾವುದೋ ಗೆಳತಿ ಸುಮ್ಮನೇ ತಮಾಷೆಗಾಗಿ ಕಳಿಸುವ ಎಸ್ಸೆಮ್ಮೆಸ್ ಕೂಡಾ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಿಸಬಹುದು. ಅವಳೊಬ್ಬಳೇ ನಿಮ್ಮ ಜೀವನದಲ್ಲಿ ಇರುವುದು ಅಂತ ಮೊದಲು ಸ್ಪಷ್ಟಪಡಿಸಿ. ಸಂಗಾತಿಗಳ ಮಧ್ಯೆ ನಂಬಿಕೆಯಿರಬೇಕಾಗಿದ್ದು ಬಹಳ ಮುಖ್ಯ ಅಂತ ಅವಳಿಗೆ ತಿಳಿಸಿ. ಮುಚ್ಚಿಡಲು ಏನೂ ಇಲ್ಲದಿದ್ದರೂ ಈ ರೀತಿ ಪದೇಪದೇ ಚೆಕ್ ಮಾಡುವುದು ನಿಮ್ಮ ಕ್ರೆಡಿಬಿಲಿಟಿಯನ್ನು ಸಂಶಯಿಸಿದಂತೆ ಅಂತ ಅವಳಿಗೆ ಸ್ಪಷ್ಟವಾಗಿ ತಿಳಿಸಿಬಿಡಿ. ಮತ್ತೂ ಅವಳು ಅಪರೂಪಕ್ಕೊಮ್ಮೆ ಚಾಳಿ ಮುಂದುವರಿಸಿದರೆ ಅದನ್ನು ಅವಳ ಹುಟ್ಟಾಗುಣ ಅಂತ ನಿರ್ಲಕ್ಷಿಸಿಬಿಡಿ. ನೀವು ಪ್ರಾಮಾಣಿಕರಾಗಿದ್ದರೆ ನಿಮಗೇನು ಚಿಂತೆ? ಸ್ವಲ್ಪ ದಿನ ನೋಡಬಹುದು. ಕೊನೆಗೆ ಅವಳಿಗೇ ಅದು ಬೋರಾಗಿ ಬಿಡುತ್ತಾಳೆ. ನೀವು ಸುಮ್ಮನೇ ಮನಸ್ಸು ಕಹಿಮಾಡಿಕೊಳ್ಳಬೇಡಿ ಅಷ್ಟೇ. ಸದ್ಯವೇ ಮದುವೆಯಾಗುತ್ತಿದ್ದೀರಿ. ಜಸ್ಟ್ ಚಿಲ್.

———

ನನಗಿನ್ನೂ ನನ್ನ ವ್ಯಾಲೆಂಟೈನ್ ಸಿಕ್ಕಿಲ್ಲ
ಪ್ರ : ನಾನೊಬ್ಬಳು ವೈದ್ಯಕೀಯ ವಿದ್ಯಾರ್ಥಿನಿ. ವಯಸ್ಸು 22. ಹತ್ತನೇ ತರಗತಿಯವರೆಗೆ ನಾನು ಓದಿದ್ದು ಹಳ್ಳಿಯಲ್ಲಿ. ಅದೂ ಕನ್ನಡ ಮೀಡಿಯಂ ಸ್ಕೂಲಿನಲ್ಲಿ. ಪಿಯುಸಿಗೆ ಬಂದಾಕ್ಷಣ ಎಲ್ಲರೂ ಚಟಪಟಾಂತ ಇಂಗ್ಲೀಷಿನಲ್ಲಿ ಮಾತಾಡುವಾಗ ನಾನು ಯಾಕೂ ಬೇಡದವಳೇನೋ ಅನಿಸುತ್ತಿತ್ತು. ಆದರೆ ನಾನು ಅವರೆಲ್ಲರಿಗಿಂತ ಎಕ್ಸಾಮಿನಲ್ಲಿ ಒಳ್ಳೆಯ ಮಾಕ್ರ್ಸ್ ಗಿಟ್ಟಿಸಿ ಸಿಇಟಿಯಲ್ಲೂ ಉತ್ತಮ ರ್ಯಾಂಕ್ ಪಡೆದು ಮೆಡಿಕಲ್ ಸೀಟ್ ಗಿಟ್ಟಿಸಿಕೊಳ್ಳುವುದರಲ್ಲಿ ಯಶಸ್ವಿಯಾದೆ. ಈಗಲೂ ಓದುವುದರಲ್ಲಿ ಮುಂದಿದ್ದೇನೆ. ಆದರೆ ನನ್ನ ವೈಯಕ್ತಿಕ ಜೀವನದಲ್ಲಿ ನಾನು ಸಂತೋಷವಾಗಿ ಇಲ್ಲ. ನನ್ನ ಹೆಚ್ಚಿನ ಗೆಳತಿಯರಿಗೆ ಬಾಯ್‍ಫ್ರೆಂಡ್ಸ್ ಇದ್ದಾರೆ. ಆದರೆ ನನಗೆ ಮಾತ್ರ ಯಾರೂ ಇಲ್ಲ. ಎಲ್ಲಾ ಹುಡುಗರೂ ನನ್ನನ್ನು ಗೌರವದಿಂದ ಕಾಣುತ್ತಾರೆಯೇ ವಿನಃ ನನ್ನ ಜೊತೆ ಆತ್ಮೀಯವಾಗಿ ಹತ್ತಿರ ಬರುತ್ತಿಲ್ಲ. ಹಳ್ಳಿಯಿಂದ ಬಂದ ನಾನು ಸಲ್ವಾರ್ ಕಮೀಜ್ ಬಿಟ್ಟು ಬೇರೆ ಯಾವ ಡ್ರೆಸ್ಸೂ ತೊಡುತ್ತಿಲ್ಲ. ಅದಕ್ಕಾಗಿ ಎಲ್ಲರೂ ನನ್ನನ್ನು ಬೆಹೆನ್‍ಜಿ ತರಹ ನೋಡುತ್ತಾರೆ. ಎಲ್ಲರೂ ಈಗ ವ್ಯಾಲೆಂಟೈನ್ ಡೇಯ ಸೆಲೆಬ್ರೇಶನ್ನಿನಲ್ಲಿ ಇದ್ದಾರೆ. ಆದರೆ ನಾನು ಮಾತ್ರ ಒಂಟಿಯಾಗಿ ಹಾಸ್ಟೇಲಿನಲ್ಲಿ ಕಳೆಯಬೇಕಿದೆ. ನನಗ್ಯಾರೂ ವ್ಯಾಲೆಂಟೈನ್ ಇಲ್ಲ ಅಂತ ಬೇಸರವಾಗುತ್ತಿದೆ. ಎಲ್ಲರಂತೆ ನಾನ್ಯಾಕಿಲ್ಲ? ಬರುವ ವ್ಯಾಲೆಂಟೈನ್ ಡೇ ಒಳಗಾದರೂ ನನಗೆ ಬಾಯ್‍ಫ್ರೆಂಡ್ ಸಿಗಬಹುದೇ?

ಉ : ನಿಮ್ಮಂತಹ ಬುದ್ಧಿವಂತ ಹುಡುಗಿಯೇ ಈ ರೀತಿ ಇಂತಹ ವಿಷಯಕ್ಕೆಲ್ಲ ಮನಸ್ಸು ಚಿಕ್ಕದು ಮಾಡಿಕೊಂಡರೆ ಹೇಗೆ? ನೀವಿನ್ನೂ ನಿಮ್ಮ ಮುಗ್ಧತೆ ಹಾಗೇ ಇಟ್ಟುಕೊಂಡಿದ್ದು ನಿಮ್ಮ ಪ್ಲಸ್ ಪಾಯಿಂಟ್. ನಿಮಗಿನ್ನೂ ವಯಸ್ಸು ಚಿಕ್ಕದು. ಅದೂ ಅಲ್ಲದೇ ನೀವು ಆರಿಸಿಕೊಂಡ ಕ್ಷೇತ್ರಕ್ಕಂತೂ ಎಷ್ಟು ಡೆಡಿಕೇಶನ್ ಇದ್ದರೂ ಕಡಿಮೆ. ಹಾಗಿರುವಾಗ ನಿಮಗೆ ಬಾಯ್‍ಫ್ರೆಂಡ್ ಇಲ್ಲದ್ದು ಒಂದು ಲೆಕ್ಕದಲ್ಲಿ ಒಳ್ಳೆಯದೇ ಆಯಿತಲ್ಲಾ? ಇದ್ದಿದ್ದರೆ ನಿಮ್ಮ ಹೆಚ್ಚಿನ ಸಮಯ ಅವನ ಓಲೈಕೆಗೇ ಮೀಸಲಾಗುತ್ತಿತ್ತು. ಈಗ ನೀವು ಫ್ರೀ ಬರ್ಡ್. ಎಲ್ಲರ ಜೊತೆಯೂ ತಮಾಷೆಯಿಂದ ಬೆರೆಯುತ್ತಾ ಯಾವ ಬಂಧನವೂ ಇಲ್ಲದೇ ಹಾಯಾಗಿರಿ. ನೀವಾಗಿ ಯಾರನ್ನೂ ಹುಡುಕಿಕೊಂಡು ಹೋಗುವುದೇನೂ ಬೇಡ. ನೀವು ಹೇಗಿದ್ದಿರೋ ಹಾಗೇ ನಿಮ್ಮನ್ನು ಇಷ್ಟಪಡುವ ಹುಡುಗ ನಿಮಗೆ ಸಿಗುವವರೆಗೆ ತಾಳ್ಮೆಯಿಂದ ಇರಿ. ಪ್ರೀತಿಸಲು ವ್ಯಾಲೆಂಟೈನ್ ದಿನವೇ ಆಗಬೇಕೆಂದಿಲ್ಲ. ಅದೆಲ್ಲ ಬರೀ ಕಮರ್ಷಿಯಲ್ಲಿಗಾಗಿ ಮಾಡಿದ ಶೋಆಫ್ ಅಷ್ಟೇ. ನಿಮ್ಮ ಹೃದಯಕ್ಕೆ ಹತ್ತಿರವಾಗುವ ಹುಡುಗ ಸಿಕ್ಕ ದಿನವೇ ನಿಮಗೆ ವ್ಯಾಲೆಂಟೈನ್ಸ್ ಡೇ. ಇನ್ನು ನೀವು ಹಳ್ಳಿಯಿಂದ ಬಂದವರು ಅಂತ ಕೀಳರಿಮೆ ಬೆಳೆಸಿಕೊಳ್ಳುವ ಅಗತ್ಯವೇ ಇಲ್ಲ. ಬೇರೆಯವರಿಗಾಗಿ ನಿಮ್ಮನ್ನು ಬದಲಿಸಿಕೊಳ್ಳುವ ದರ್ದು ನಿಮಗೇಕೆ? ಹೇಗೂ ಡಾಕ್ಟರ್ ಅಂತಹ ಒಳ್ಳೆಯ ಪದವಿ ಪಡೆಯುತ್ತಿದ್ದೀರಿ. ಆತ್ಮವಿಶ್ವಾಸದಿಂದ ಮುಂದುವರಿಯಿರಿ. ನಿಮ್ಮಲ್ಲಿ ಮೂಲಭೂತವಾಗಿ ಇರುವ ಶಿಸ್ತು ನಿಮ್ಮನ್ನು ಬಹಳ ಎತ್ತರಕ್ಕೆ ಕೊಂಡೊಯ್ಯಬಲ್ಲದು.