ಉಡುಪಿ ಶಾಲೆಗಳಲ್ಲಿ ತುಳು ಭಾಷೆ ಕಲಿಕೆಗೆ ಕಡಿಮೆ ವಿದ್ಯಾರ್ಥಿಗಳು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜಿಲ್ಲೆಯಲ್ಲಿ ತುಳು ಬಾಷೆ ಕಲಿಕೆಗೆ ಯುವಜನಾಂಗದಲ್ಲಿ ಆಸಕ್ತಿ ಕಡಿಮೆ ಇರುವಂತೆ ಕಂಡು ಬಂದಿದೆ. ಈ ಬಾರಿ 2017-18ರ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಕೇವಲ 36 ವಿದ್ಯಾರ್ಥಿಗಳು ಮಾತ್ರ ತುಳು ಭಾಷೆಯನ್ನು ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇಡೀ ಜಿಲ್ಲೆಯಲ್ಲಿ ಕೇವಲ ಎರಡು ಶಾಲೆಗಳು ಮಾತ್ರ ತುಳುವನ್ನು ಮೂರನೇ ಭಾಷೆಯಾಗಿ ಆಯ್ದುಕೊಳ್ಳುವ ಆಯ್ಕೆಯನ್ನು ಹೊಂದಿವೆ.

ಇತರ ಭಾಷೆಗಳಿಗೆ ಹೋಲಿಸಿದರೆ ತುಳು ಭಾಷೆ ಕಲಿಕೆಗೆ ಗೌರವವೇನು ಕಡಿಮೆ ಇಲ್ಲ. ರಾಷ್ಟ್ರೀಯ ಶಿಕ್ಷಣ ನಿಯಮಗಳ ಮಾರ್ಗದರ್ಶನದಂತೆ ತುಳು ಭಾಷೆಯ ಪಠ್ಯಪುಸ್ತಕಗಳನ್ನು ಸಿದ್ಧಗೊಳಿಸಲಾಗಿದೆ.

ರಾಷ್ಟ್ರೀಯ ಶಿಕ್ಷಣ ನಿಯಮಗಳಲ್ಲಿ ಆರರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಪಠ್ಯಪುಸ್ತಕಗಳಲ್ಲಿ 84 ಮೌಲ್ಯಗಳು ಅಡಕವಾಗಿರಬೇಕು. ಈ ಮೌಲ್ಯಗಳು ಸತ್ಯ, ವಿಧೇಯತೆ, ಇತರರಿಗೆ ಸಹಾಯ ಮಾಡುವುದು, ದೇಶಭಕ್ತಿ, ಇತರ ಭಾಷೆಗಳಿಗೆ ಗೌರವ ಸೇರಿದಂತೆ 84 ಮೌಲ್ಯಗಳನ್ನು ಪಠ್ಯಪುಸ್ತಕಗಳು ಒಳಗೊಂಡಿರಬೇಕು. ಈ ಎಲ್ಲಾ ಮೌಲ್ಯಗಳನ್ನು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸುವ ಮುನ್ನ ಬೋಧಿಸಬೇಕು. ಈ ಎಲ್ಲಾ ಅಂಶಗಳನ್ನು ತುಳು ಪಠ್ಯಪುಸ್ತಕ ಹೊಂದಿದೆ.

ದುಃಖದ ಸಂಗತಿಯೆಂದರೆ ಉಡುಪಿ ಜಿಲ್ಲೆಯು ತಡವಾಗಿ ಪ್ರತಿಕ್ರಿಯಿಸಿದೆ.

ಜಿಲ್ಲೆ ತುಳು ಭಾಷೆಯನ್ನು ಮೂರನೇ ಭಾಷೆಯಾಗಿ ಕಳೆದ ವರ್ಷವಷ್ಟೆ ಶಾಲೆಗಳಲ್ಲಿ ಪರಿಚಯಿಸಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ವರ್ಷಗಳ ಹಿಂದೆಯೇ ಪರಿಚಯಿಸಲಾಗಿದೆ. ಹಾಗಾಗಿ 2016-17 ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಿಂದ ವಿದ್ಯಾರ್ಥಿಗಳೇ ಇರಲಿಲ್ಲ, ಮಾತ್ರವಲ್ಲ 2017-18ರಲ್ಲಿ ಕೂಡ ಇಲ್ಲ. 2018-19 ಶೈಕ್ಷಣಿಕ ವರ್ಷದಿಂದ ಉಡುಪಿ ಜಿಲ್ಲೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತುಳು ಭಾಷೆಯನ್ನು ಬರೆಯುವ ವಿದ್ಯಾರ್ಥಿಗಳು ಇರಲಿದ್ದಾರೆ.

ತುಳು ಭಾಷೆ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಯಾವುದೇ ವಿದ್ಯಾರ್ಥಿವೇತನಗಳ ಸೌಲಭ್ಯ ಇರದಿರುವುದರಿಂದ ತುಳು ಭಾಷೆ ಆಯ್ಕೆಗೆ ಕ್ಷೀಣ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ವಿದ್ಯಾರ್ಥಿಗಳ ಹೆತ್ತವರು ಹೇಳಿದ್ದಾರೆ.