ಹೆಂಡತಿಗೆ ನಾನು ದೂರ ಹೋಗುತ್ತೇನೆನ್ನುವ ಭಯ

ಪ್ರ : ನನಗೆ ಮದುವೆಯಾಗಿ ಮೂರು ವರ್ಷಗಳಾದವು. ಒಂದು ಮಗುವಿದೆ. ನಾನು ಮೊದಲು ದುಬೈಯಲ್ಲಿ ಕೆಲಸ ಮಾಡುತ್ತಿದ್ದೆ. ವರ್ಷಕ್ಕೊಮ್ಮೆ ಬರುತ್ತಿದ್ದೆ. ನನ್ನ ಹೆಂಡತಿ ನನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಳು. ಅವಳು ಆ ರೀತಿ ನೋವನ್ನು ಅನುಭವಿಸು ವುದನ್ನು ನೋಡಲಾಗದೇ ಈಗ ಮೂರು ತಿಂಗಳ ಹಿಂದೆ ಇಲ್ಲಿಗೇ ಬಂದು ನೆಲೆಸಿದ್ದೇನೆ. ನನಗೆ ದುಬೈನಲ್ಲಿ ಕೈತುಂಬಾ ಸಂಬಳ ಸಿಗುತ್ತಿತ್ತು. ಮನೆಯವರಿಗೆಲ್ಲ ಒಳ್ಳೆಯ ಸವಲತ್ತು ಒದಗಿಸಲು ಅದರಿಂದ ಸಾಧ್ಯವಾಗಿತ್ತು. ಇಲ್ಲಿ ನನಗೆ ಸಿಗುವ ಸಂಬಳದಲ್ಲಿ ದಿನದ ಖರ್ಚನ್ನೇ ಕಷ್ಟದಲ್ಲಿ ನಿಭಾಯಿಸುತ್ತಿದ್ದೇನೆ. ನನ್ನ ತಾಯಿ ಮತ್ತು ತಂಗಿಯರಿಗೆ ನಾನು ಪುನಃ ದುಬೈಗೆ ಹೋಗಲಿ ಅಂತ ಇದೆ. ಆದರೆ ಹೆಂಡತಿಗೆ ನನ್ನನ್ನು ಕಳಿಸಲು ಸ್ವಲ್ಪವೂ ಮನಸ್ಸಿಲ್ಲ. ಒಮ್ಮೊಮ್ಮೆ ನಿದ್ದೆಯಲ್ಲೂ ಮಧ್ಯೆ ಎದ್ದು ನಾನು ಇರುವುದನ್ನು ಖಾತ್ರಿಪಡಿಸಿಕೊಂಡು ನನ್ನ ಎದೆಯಲ್ಲಿ ಮುಖಹುದುಗಿಸಿ ಮಲಗುತ್ತಾಳೆ. ಮನೆಯವರು ಯಾರಾದರೂ ನಾನು ದುಬೈಗೆ ಹೋಗುವ ವಿಷಯ ಎತ್ತಿದರೆ ಅವಳ ಮುಖ ಬಿಳಿಚಿಕೊಳ್ಳುತ್ತದೆ. ನಾನು ಪುನಃ ಹೋಗುವುದಿಲ್ಲ ಅಂತ ಹೇಳಿದರೂ ಅವಳಿಗೆ ನನ್ನ ಮೇಲೆ ನಂಬಿಗೆಯಿಲ್ಲ. ಅವಳ ಸಂಬಂಧಿಕರ ಹತ್ತಿರ ನಾನು ಹೋಗದಿರುವಂತೆ ಒತ್ತಡ ಹೇರಿ ನನಗೆ ಮುಜುಗರ ತರುತ್ತಾಳೆ. ಅದೂ ಅಲ್ಲದೇ ಈಗೀಗ ಅವಳ ಆರೋಗ್ಯಸ್ಥಿತಿಯೂ ಸರಿಯಿಲ್ಲ. `ಬೇರ್ಯಾವ ಕಾಯಿಲೆಯೂ ಇಲ್ಲ, ಟೆನ್ಷನ್ ಮಾಡಿಕೊಳ್ಳದೇ ಸರಿಯಾಗಿ ಊಟ, ನಿದ್ರೆ ಮಾಡಿದರೆ ಎಲ್ಲವೂ ಸರಿಹೋಗುತ್ತದೆ’ ಅಂತ ಡಾಕ್ಟರ್ ಹೇಳುತ್ತಾರೆ. ಅವಳನ್ನು ಯಾವ ರೀತಿ ಸಂತೈಸಲಿ?

: ಮೂರು ವರ್ಷ ಅನುಭವಿಸಿದ ಒಂಟಿತನದ ಯಾತನೆ ಅವಳು ಈ ಸ್ಥಿತಿಗೆ ಬರಲು ಕಾರಣವಾಗಿದೆ. ಮದುವೆಯಾಗಿ ಗಂಡನ ಮನೆಗೆ ಬಂದಾಗ ಮೊದಲೇ ಹೆಣ್ಣಿಗೆ ಹೊಸಪರಿಸರಕ್ಕೆ, ಹೊಸಜನರಿಗೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವೇ. ಹಾಗಿರುವಾಗ ಗಂಡನ ಸಾಂಗತ್ಯ ಅವನ ಸಹಕಾರವೂ ಇಲ್ಲದಿದ್ದರೆ ಆ ಮನೆಯಲ್ಲಿ ಅವಳು ತನ್ನೆಲ್ಲ ಭಾವನೆಗಳನ್ನು ಅದುಮಿಟ್ಟುಕೊಂಡು ಬದುಕುವುದು ಮತ್ತಷ್ಟು ಕಷ್ಟವೇ. ನಿಮ್ಮ ಹೆಂಡತಿಯ ಸ್ಥಿತಿಯೂ ಹಾಗೇ ಆಗಿದೆ. ನಿಮ್ಮ ಹೆಂಡತಿಗೆ ಬೇಕಿರುವುದು ಬರೀ ದುಡ್ಡು, ಒಡವೆ ಮಾತ್ರವಲ್ಲ. ಅವಳಿಗೆ ಬೇಕಿರುವುದು ನೀವು, ನಿಮ್ಮ ಪ್ರೀತಿ. ಮನೆಯಲ್ಲಿ ಉಳಿದವರಿಗ್ಯಾರಿಗೂ ನಿಮ್ಮ ಅನುಪಸ್ಥಿತಿ ಅಷ್ಟೊಂದು ಕಾಡದಿದ್ದರೂ ಹೆಂಡತಿಗೆ ನೀವಿಲ್ಲದ್ದು ಸಹಿಸುವುದು ಕಷ್ಟವೇ. ಮನೆಯ ಉಳಿದ ಸದಸ್ಯರಿಗೆ ತಮ್ಮ ಐಷಾರಾಮಿ ಜೀವನಕ್ಕೆ ನೀವು ಹೊರದೇಶಕ್ಕೆ ಹೋಗಿಯಾದರೂ ಹೇರಳವಾಗಿ ದುಡಿಯಲಿ ಅಂತಿರಬಹುದು. ಆದರೆ ಅದು ಅವರ ಸ್ವಾರ್ಥ. ನಿಮಗೀಗ ನಿಮ್ಮ ಹೆಂಡತಿಯ ಆರೋಗ್ಯ, ಅವಳ ಸುಖಸಂತೋಷ ಎಲ್ಲಕ್ಕಿಂತ ಮುಖ್ಯವಾಗಲಿ. ನೀವೆಂದೂ ಅವಳನ್ನು ಬಿಟ್ಟು ಹೊಗುವುದಿಲ್ಲ ಅಂತ ಅವಳಿಗೆ ಪೂರ್ಣ ಭರವಸೆ ಕೊಡಿ. ಅವಳ ಜೊತೆ ಸಾಧ್ಯವಾದಷ್ಟು ಜಾಸ್ತಿ ಸಮಯ ಕಳೆಯಿರಿ. ನಿಮಗೂ ಅವಳನ್ನು ಬಿಟ್ಟು ದೂರ ಇರಲು ಇನ್ನು ಸಾಧ್ಯವೇ ಇಲ್ಲ ಅಂತ ತಿಳಿಸಿ.  ಮನೆಯವರಿಗೂ ನೀವಿನ್ನು ಇಲ್ಲಿಯೇ ಇರುವುದು, ಆಧ್ದರಿಂದ ವಿದೇಶಕ್ಕೆ ಹೋಗುವ ವಿಷಯ ಯಾರೂ ಮಾತಾಡಬಾರದು ಅಂತ ತಾಕೀತು ಮಾಡಿ. ಬರುವ ಆದಾಯದಲ್ಲೇ ಮನೆದೂಗಿಸಿಕೊಂಡು ಹೋಗಲು ತಿಳಿಸಿ. ಮನೆಯ ಉಳಿದ ಸದಸ್ಯರೂ ತಮ್ಮ ಶಕ್ತ್ಯಾನುಸಾರ ಸಂಪಾದಿಸಿದರೆ ಎಲ್ಲರೂ ನೆಮ್ಮದಿಯಿಂದ ಇರಬಹುದು.