ದೀಪಕ್, ಬಷೀರ್ ಕೊಲೆಗಳ ನಂತರ ನಾಗರಿಕರಿಗೆ ಕಾಡುತ್ತಿದೆ ಅವ್ಯಕ್ತ ಭಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಾಟಿಪಳ್ಳದಲ್ಲಿ ದೀಪಕ್ ರಾವ್ ಹಾಗೂ ಕೊಟ್ಟಾರಚೌಕಿಯಲ್ಲಿ ಅಬ್ದುಲ್ ಬಷೀರ್ ಅವರ ಕೊಲೆ ನಡೆದ ನಂತರದ ಬೆಳವಣಿಗೆಗಳಲ್ಲಿ ಆ ಪ್ರದೇಶದ ಹಾಗೂ ಮಂಗಳೂರಿನ ಜನತೆಯ ಮನಸ್ಸಿನಲ್ಲಿ ಒಂದು ಅವ್ಯಕ್ತ ಭಯ ಆವರಿಸಿದೆ ಎಂಬುದು ಸುಳ್ಳಲ್ಲ. ಇತ್ತೀಚೆಗೆ ಡಿವೈಎಫೈ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್ ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆಂಬ ಅನುಮಾನ ವ್ಯಕ್ತ ಪಡಿಸಿದ್ದರಲ್ಲದೆ ಅವರ ಕಾರಿಗೆ ಅನಾಮಿಕರು ತಮ್ಮ ಬೈಕನ್ನು ಡಿಕ್ಕಿ ಹೊಡೆಸಿದ್ದರೆಂದೂ ಅವರು ದೂರಿಕೊಂಡಿದ್ದರು.

ಈ ನಡುವೆ ವಿದ್ಯಾರ್ಥಿ ನಾಯಕ ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರೊಬ್ಬರು ತಮ್ಮನ್ನು ಆಯುಧಗಳನ್ನು ಹೊಂದಿರುವ ಕೆಲವು ಪರಿವಾರ ಕಾರ್ಯಕರ್ತರು ಹಿಂಬಾಲಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಸೋಮವಾರ ರಾತ್ರಿ ಒಂದಿಬ್ಬರು ಕೈಯ್ಯಲ್ಲಿ ಆಯುಧಗಳನ್ನು ಹಿಡಿದು ತಮ್ಮ ಹೆಸರನ್ನು ಕೂಗುತ್ತಾ ಮನೆಯ ಹೊರಗೆ ತಮಗಾಗಿ ಕಾದು ನಿಂತಿದ್ದರೆಂದು ಆತ ತಮ್ಮ ಸ್ನೇಹಿತರಲ್ಲಿ ಹಾಗೂ ಕಾಲೇಜಿನ ಶಿಕ್ಷಕರಲ್ಲಿ ಹೇಳಿಕೊಂಡಿದ್ದಾರೆ.

ತಾನು ಈ ಬಗ್ಗೆ ದೂರು ನೀಡಲು ಸುರತ್ಕಲ್ ಠಾಣೆಗೆ ತೆರಳಿದ್ದರೂ ಪೊಲೀಸರು ದೂರು ದಾಖಲಿಸಿಲ್ಲ ಹಾಗೂ ರಕ್ಷಣೆಯೊದಗಿಸಿಲ್ಲ ಎಂದು ಆತ ಅಲವತ್ತುಕೊಂಡಿದ್ದಾರೆ. ಆದರೆ  ಸುರತ್ಕಲ್ ಠಾಣೆಯ ಪೊಲೀಸರು ತಮಗೆ ಯಾರೂ ದೂರು ನೀಡಿಲ್ಲ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಸ್ಥಳೀಯ ಹಿಂದೂ ಜಾಗರಣ ವೇದಿಕೆ ಘಟಕದ ಸಹ ಸಂಚಾಲಕ ಭರತ್ ಕುಮಾರ್ ಕೂಡ ದೂರು ನೀಡಿ ತಾನು ಆಗಂತುಕರ ದಾಳಿಯಿಂದ ತಪ್ಪಿಸಿಕೊಂಡು ಬಂದಿದ್ದಾಗಿ ಹೇಳಿಕೊಂಡಿದ್ದರು. ಆದರೆ ತನಿಖೆಯ ವೇಳೆ ಆತನ ಹೇಳಿಕೆಯಲ್ಲಿ ವೈರುಧ್ಯತೆಗಳಿದ್ದರೂ ಆತನ ದೂರು ಸಂಪೂರ್ಣವಾಗಿ ಸುಳ್ಳು ಎಂದು ನಿರ್ದರಿಸಲಾಗಿಲ್ಲ, ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ ಹೇಳಿದ್ದಾರೆ.

 

LEAVE A REPLY