ಟೆಲಿಕಾಂ ಮ್ಯೂಚುಯಲ್ ಫಂಡ್ ಕ್ಷೇತ್ರದ ಆಶಾದಾಯಕ ಬೆಳವಣಿಗೆ

ಮುಂಬರುವ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ದೂರ ಸಂಪರ್ಕ ಉದ್ಯಮಗಳು ಶೀಘ್ರ ಮುನ್ನಡೆ ಕಾಣುತ್ತವೆ ಎಂದು ಅರ್ಥಶಾಸ್ತ್ರಿಗಳು ಹೇಳುತ್ತಾರೆ.

* ಮಧುರಾ ಕಾರ್ನಿಕ್/ಮನು ಬಾಲಚಂದ್ರನ್

ನರೇಂದ್ರ ಮೋದಿ ಸರ್ಕಾರದ ಅಮಾನ್ಯೀಕರಣ ನೀತಿಯಿಂದ ಭಾರತದ ಅರ್ಥವ್ಯವಸ್ಥೆಯಲ್ಲಿ ಬಹುತೇಕ ಕ್ಷೇತ್ರಗಳು ನೆಲಕಚ್ಚಿರುವುದು ಸ್ಪಷ್ಟವಾಗುತ್ತಿದೆ. ಅಲ್ಪಕಾಲಿಕವಾದರೂ ಹಲವಾರು ಕ್ಷೇತ್ರಗಳಲ್ಲಿ ಹಿನ್ನಡೆ ಕಾಣಬಹುದಾಗಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಮೋದಿಯ ನೀತಿಯಿಂದ ಮುನ್ನಡೆ ಉಂಟಾಗಿರುವುದನ್ನು ಕಾಣಬಹುದು.
ಕೆಳಮಟ್ಟದಲ್ಲಿ ಭಾರತದ ಪ್ರಜೆಗಳು ನಗದು ಕೊರತೆಯಿಂದ ಜರ್ಝರಿತರಾಗಿದ್ದು ಅರ್ಥವ್ಯವಸ್ಥೆಗೆ ಭಾರಿ ಪೆಟ್ಟು ಬಿದ್ದಿರುವುದು ಸ್ಪಷ್ಟವಾಗುತ್ತಿದೆ. ಅಮಾನ್ಯೀಕರಣದ ಮುನ್ನ ಇದ್ದ ನಿರೀಕ್ಷೆಗಿಂತಲೂ ಇದು ಬಹಳ ಕಡಿಮೆಯಾಗಿದೆ. ನಗದು ರದ್ದತಿಯಿಂದ ನೇರವಾಗಿ ಬಿಕ್ಕಟ್ಟು ಎದುರಿಸುತ್ತಿರುವ ಕ್ಷೇತ್ರಗಳಲ್ಲಿ ತಯಾರಿಕಾ ಕ್ಷೇತ್ರ ಮತ್ತು ಗ್ರಾಹಕ ವಸ್ತುಗಳ ಕೈಗಾರಿಕೆಗಳು ಪ್ರಮುಖವಾಗಿವೆ. ನಗದು ಕೊರತೆಯನ್ನು ಸರಿದೂಗಿಸಲು ಉದ್ಯಮಿಗಳು ತಮ್ಮ ಉತ್ಪಾದನಾ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಿದ್ದಾರೆ. ಗ್ರಾಹಕರು ಬಹಳ ಎಚ್ಚರಿಕೆಯಿಂದ ಖರ್ಚು ಮಾಡುತ್ತಿದ್ದಾರೆ. ಇದರಿಂದ ಗ್ರಾಹಕ ವಸ್ತುಗಳ ತಯಾರಕರು ಹಿನ್ನಡೆ ಅನುಭವಿಸುವಂತಾಗಿದೆ. ಆದರೂ ಕೆಲವು ಉದ್ಯಮಗಳಲ್ಲಿ ಅಮಾನ್ಯೀಕರಣ ಸಕಾರಾತ್ಮಕ ಬೆಳವಣಿಗೆ ತಂದಿದೆ.
ಪುರಾಣ ಕಥನದಲ್ಲಿನ ಸಿಂಡ್ರೆಲಾಗೆ ಕಾಲ್ಪನಿಕ ಗಾಡ್ ಮದರ್ ನೆರವಾದಂತೆ ಬ್ಯಾಂಕುಗಳಿಗೆ ಅಮಾನ್ಯೀಕರಣ ನೆರವಾಗಿದೆ. ಜನರ ಬಳಿ ಇದ್ದ 500 ಮತ್ತು 1000 ರೂ ನೋಟುಗಳನ್ನು ಬ್ಯಾಂಕುಗಳಿಗೆ ಜಮಾ ಮಾಡಿರುವುದರಿಂದ ಬ್ಯಾಂಕುಗಳಿಗೆ ಸಾಲ ಮಂಜೂರು ಮಾಡಲು ಸಾಕಷ್ಟು ಹಣ ಲಭ್ಯವಾಗಿದೆ. ಬ್ಯಾಂಕುಗಳ ಬಳಿ ಹೆಚ್ಚಿನ ಹಣ ಇರುವುದರಿಂದ ಖಜಾನೆ ವಹಿವಾಟುಗಳು ಉಲ್ಬಣಗೊಂಡಿದ್ದು ಬ್ಯಾಂಕುಗಳಿಗೆ 38,200 ಕೋಟಿ ರೂ ನಗದು ಹೆಚ್ಚಳವಾಗಿದೆ. ಬ್ಯಾಂಕಿಂಗ್ ಕ್ಷೇತ್ರ ಹಲವಾರು ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಲಾಭಾಂಶವೂ ಕುಸಿಯುತ್ತಿದ್ದ ಸನ್ನಿವೇಶದಲ್ಲಿ ಬೃಹತ್ ಪ್ರಮಾಣದ ಬಂಡವಾಳದ ಒಳಹರಿವು ಬ್ಯಾಂಕುಗಳಿಗೆ ಚೇತನ ನೀಡಿದೆ. ಅದರೆ ಬ್ಯಾಂಕುಗಳಿಗೆ ಪಾವತಿಯಾಗಿರುವ ಹಣವನ್ನು ಎಷ್ಟು ದಿನ ಉಳಿಸಿಕೊಳ್ಳಲು ಸಾಧ್ಯ ಎಂಬ ನಿಗೂಢ ಪ್ರಶ್ನೆಯೂ ಉದ್ಯಮವನ್ನು ಕಾಡುತ್ತಿದೆ. ಒಮ್ಮೆ ನಗದು ಹರಿವು ಹೆಚ್ಚಾದಲ್ಲಿ ಬ್ಯಾಂಕುಗಳ ಠೇವಣಿ ಪ್ರಮಾಣವೂ ಕುಸಿಯುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಅಮಾನ್ಯೀಕರಣ ನೀತಿಯ ಪರಿಣಾಮ ಲಕ್ಷಾಂತರ ಜನರು ತಮ್ಮ ಹಣವನ್ನು ಮ್ಯೂಚುಯಲ್ ಫಂಡುಗಳಲ್ಲಿ ಹೂಡಲು ಮುಂದಾಗುತ್ತಾರೆ. ಗೃಹಸ್ಥರು ತಮ್ಮ ಬಳಿ ಇರುವ ಹಣವನ್ನು ಆದಾಯ ತೆರಿಗೆ ಇಲಾಖೆಯ ಕಣ್ಣು ತಪ್ಪಿಸಲು ಮ್ಯೂಚುಯಲ್ ಫಂಡುಗಳಲ್ಲಿ ಹೂಡುತ್ತಾರೆ. ರಿಯಲ್ ಎಸ್ಟೇಟ್ ಮತ್ತು ಚಿನ್ನದ ಒಡವೆಗಳನ್ನು ಬಿಟ್ಟು ಬಂಡವಾಳ ಮಾರುಕಟ್ಟೆಯಲ್ಲಿ ತೊಡಗಿಸುತ್ತಾರೆ. ಒಂದು ಅಂದಾಜಿನ ಪ್ರಕಾರ ಹತ್ತು ಟ್ರಿಲಿಯನ್ ರೂ ಬ್ಯಾಂಕುಗಳಲ್ಲಿ ಸಂಗ್ರಹವಾಗಲಿವೆ ಇದರಲ್ಲಿ ಶೇ 10ರಷ್ಟು ಔದ್ಯಮಿಕ ಕ್ಷೇತ್ರಕ್ಕೆ ಲಭ್ಯವಾಗುತ್ತದೆ ಎನ್ನುತ್ತಾರೆ ಕೆಬಿಸಿ ಮ್ಯೂಚುಯಲ್ ಫಂಡ್ ಸಿಇಒ ಪ್ರದೀಪ್ ಕುಮಾರ್.
ಗೃಹಿಣಿಯರೂ ಸಹ ತಮ್ಮ ಬಳಿ ನಗದು ಹಣ ಇಟ್ಟುಕೊಳ್ಳುವುದನ್ನು ಬಿಟ್ಟು ಮ್ಯೂಚುಯಲ್ ಫಂಡಿನಲ್ಲಿ ಹೂಡುವ ಸಾಧ್ಯತೆಗಳಿವೆ. 2016ರಲ್ಲಿ ಮುಂಗಾರು ಉತ್ತಮವಾಗಿದ್ದ ಪರಿಣಾಮ ಅಮಾನ್ಯೀಕರಣದ ನಂತರವು ಸಕ್ಕರೆ ಉದ್ಯಮ ಚೇತರಿಕೆ ಕಂಡಿದೆ. ಆಮದು ಮಾರುಕಟ್ಟೆಯ ಪೈಪೋಟಿಯಿಂದ ತತ್ತರಿಸಿ ಹೋಗಿದ್ದ ಸಕ್ಕರೆ ಉದ್ಯಮ ಹೆಚ್ಚಿನ ಬೇಡಿಕೆಯನ್ನು ಎದುರಿಸುತ್ತಿದ್ದು ಆಮದು ಸುಂಕ ಕಡಿಮೆ ಮಾಡಲು ಆಗ್ರಹಿಸುತ್ತಿದ್ದವು. ಆದರೆ ಅಮಾನ್ಯೀಕರಣದ ಪರಿಣಾಮ ಬೇಡಿಕೆ ಕುಸಿಯಲಿದ್ದು ಮುಂದಿನ ವರ್ಷ ಉತ್ತಮ ಬೆಳೆ ನಿರೀಕ್ಷಿಸಲಾಗಿದೆ.
ಅಮಾನ್ಯೀಕರಣದಿಂದ ವಿದ್ಯುತ್ ಉತ್ಪಾದನೆಯಲ್ಲೂ ಉತ್ತಮ ವೃದ್ಧಿಯಾಗುವ ಸಾಧ್ಯತೆಗಳಿವೆ. ವಿದ್ಯುತ್ ನಿಗಮಗಳಿಗೆ ಜನರು ತಮ್ಮ ಬಳಿ ಇದ್ದ ಹಳೆಯ ನೋಟುಗಳನ್ನು ಅಪಾರ ಪ್ರಮಾಣದಲ್ಲಿ ಪಾವತಿ ಮಾಡಿರುವುದರಿಂದ ಒಳಹರಿವು ಹೆಚ್ಚಾಗಿದೆ. ಬ್ಯಾಂಕುಗಳ ಒಳಹರಿವು ಹೆಚ್ಚಾಗಿರುವುದರಿಂದ ಬಡ್ಡಿ ದರಗಳೂ ಕುಸಿಯಲಿದ್ದು ವಿದ್ಯುತ್ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚಿನ ಸಾಲ ದೊರೆಯಲಿದೆ.
ಅಮಾನ್ಯೀಕರಣದಿಂದ ಅತಿ ಹೆಚ್ಚಿನ ಲಾಭ ಪಡೆದಿರುವುದು ಡಿಜಿಟಲ್ ಪಾವತಿಯ ಉದ್ಯಮಗಳು ಎನ್ನಬಹುದು. ಇ ವ್ಯಾಲೆಟ್, ಪೇಟಿಎಂಗಳಲ್ಲಿ ನಿತ್ಯದ ವಹಿವಾಟು ಶೇ 75 ಲಕ್ಷಕ್ಕೆ ಏರಿದೆ. ಮೊಬಿವಿಕ್ ವ್ಯವಹಾರದಲ್ಲಿ ಶೇ 400ರಷ್ಟು ವೃದ್ಧಿಯಾಗಿದೆ. ಸರ್ಕಾರ ಯೋಜಿಸಿರುವ `ಭೀಮ್’ ಈವರೆಗೂ 7 ಲಕ್ಷ ವ್ಯವಹಾರಗಳನ್ನು ಕಂಡಿದೆ.
ಭಾರತದ ಡಿಜಿಟಲ್ ಪಾವತಿ ಉದ್ಯಮದ ವಹಿವಾಟು 120 ಕೋಟಿ ಡಾಲರುಗಳಿಂದ 240 ಕೋಟಿಗೆ ಏರಲಿದೆ. ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಜನರು ಡಿಜಿಟಲ್ ವ್ಯವಹಾರಕ್ಕೆ ಮುಂದಾಗುತ್ತಿರುವುದರಿಂದ ಸಂಪರ್ಕ ಮಾಧ್ಯಮ ಮತ್ತು ದೂರ ಸಂಪರ್ಕ ಉದ್ಯಮಗಳು ಸಕ್ರಿಯವಾಗಲಿವೆ. ನಗದುರಹಿತ ಆರ್ಥಿಕ ವ್ಯವಸ್ಥೆಯಲ್ಲಿ ದೂರ ಸಂಪರ್ಕ ಉದ್ಯಮಗಳು ಅತಿ ಹೆಚ್ಚಿನ ಲಾಭ ಗಳಿಸುವುದು ಖಚಿತ ಎಂದು ತಜ್ಞರು ಹೇಳುತ್ತಾರೆ. ಮೊಬೈಲ್ ಮತ್ತು ಮೊಬೈಲ್ ತಂತ್ರಜ್ಞಾನಕ್ಕೆ ಬೇಡಿಕೆ ಉಲ್ಬಣಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಮುಂಬರುವ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ದೂರ ಸಂಪರ್ಕ ಉದ್ಯಮಗಳು ಶೀಘ್ರ ಮುನ್ನಡೆ ಕಾಣುತ್ತವೆ ಎಂದು ಕೇರ್ ರೇಟಿಂಗ್ ಸಿಇಒ ಮದನ್ ಸಬ್ನವಿಸ್ ಹೇಳುತ್ತಾರೆ.