ಮೋದಿ ವಿರುದ್ಧ ಫತ್ವಾ ಹೊರಡಿಸಿದ ಕೊಲ್ಕತ್ತಾ ಮಸೀದಿಯ ಇಮಾಮ್

ಕೊಲ್ಕತ್ತಾ :  ನಗರದ ಟಿಪ್ಪು ಸುಲ್ತಾನ ಮಸೀದಿಯ ಇಮಾಮ್ ಆಗಿರುವ ಸಯ್ಯದ್ ಮೊಹಮ್ಮದ್ ನೂರುರ್ ರಹಮಾನ್ ಬರ್ಕತಿ ಎಂಬವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ `ಫತ್ವಾ’ ಹೊರಡಿಸಿದ್ದು, ಅವರು ನೋಟು ಅಮಾನ್ಯೀಕರಣದ ಮೂಲಕ ಜನರಿಗೆ `ವಂಚನೆÀ’ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಬೆಳವಣಿಗೆ ಬಿಜೆಪಿಯಿಂದ ತೀಕ್ಷ್ಣ ಪ್ರತಿಕ್ರಿಯೆಗೆ ಕಾರಣವಾಗಿದ್ದು ಇಮಾಮನನ್ನು ಬಂಧಿಸಬೇಕು ಎಂದು ಅದು ಆಗ್ರಹಿಸಿದೆ.

“ನೋಟು ಅಮಾನ್ಯದಿಂದ ಜನರು ಪ್ರತಿ ದಿನ ಸಂಕಷ್ಟಕ್ಕೀಡಾಗಿದ್ದಾರೆ. ಸಮಾಜವನ್ನು ಹಾಗೂ ದೇಶದ ಮುಗ್ಧ ನಾಗರಿಕರನ್ನು ಮೋದಿ ವಂಚಿಸುತ್ತಿದ್ದಾರೆ. ಅವರು ಪ್ರಧಾನಿಯಾಗಿ ಮುಂದುವರಿಯುವುದು ಯಾರಿಗೂ ಇಷ್ಟವಿಲ್ಲ ಹಾಗೂ ಪ್ರಧಾನಿಯಾಗಿ ಮುಂದುವರಿಯಲೂ ಅವರು ಅರ್ಹತೆ ಕಳೆದುಕೊಂಡಿದ್ದಾರೆ” ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಸುರಾ ಮತ್ತು ಆಲ್ ಇಂಡಿಯ ಮೈನಾರಿಟಿ ಫೋರಂ ಆಯೋಜಿಸಿದ್ದ ಸಮ್ಮೇಳನವೊಂದರಲ್ಲಿ ನೂರುರ್ ರೆಹಮಾನ್ ಆರೋಪಿಸಿದರು.

ಮೋದಿಯನ್ನು `ಮತೀಯ’ ವ್ಯಕ್ತಿ ಎಂದು ಬಣ್ಣಿಸಿ, ಮಮತಾ ಬ್ಯಾನರ್ಜಿಯನ್ನು `ಮತೀಯ ಸೌಹಾರ್ದತೆ’ಯ ಸಂಕೇತವೆಂದು ಬಣ್ಣಿಸಿದ ರೆಹಮಾನ್  ದೇಶದ ಹೆಚ್ಚಿನ ಜನರು ಮಮತಾ ಬ್ಯಾನರ್ಜಿಯವರು ತಮ್ಮ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆಂದು ಹೇಳಿದ್ದಾರೆ.