ಕಳ್ಳತನ ಆರೋಪ ಹೊತ್ತ ಮಗನನ್ನು ಪೊಲೀಸರಿಗೆ ಒಪ್ಪಿಸಿದ ತಂದೆ ಮತ್ತೆ ಆತನನ್ನು ನೋಡಲೇ ಇಲ್ಲ

ಪೊಲೀಸರು ಹೊಡೆದು ಸಾಯಿಸಿದ ಅಗ್ನೆಲೋ ಮತ್ತು ರೋಧಿಸುತ್ತಿರುವ ತಂತೆ

ಕ್ರಿಮಿನಲ್ ಪ್ರೊಸೀಜರ್ ಕೋಡ್ ಅನ್ವಯ ಈ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ ಅಧಿಕಾರಿ ಯಾರು ಎಂದು ನಮೂದಿಸಿಲ್ಲ, ಬಂಧನದ ಮೆಮೋ ತಯಾರಿಸಿಲ್ಲ ಹಾಗೂ ಅವರ ಬಂಧನವಾದ ದಿನಾಂಕ ಹಾಗೂ ಸಮಯವನ್ನು ಕೂಡ ನಮೂದಿಸಿಲ್ಲ

ವಿಶೇಷ ವರದಿ

“ಆತ ಜೋರಾಗಿ ಅಳುತ್ತಾ, ಅಪ್ಪಾ `ನನ್ನನ್ನು ಕಾಪಾಡಿ, ಕಾಪಾಡಿ’ ಎಂದು ಗೋಗರೆಯುತ್ತಿದ್ದ. ನನಗೆ ರಾತ್ರಿಯಿಡೀ ಹೊಡೆಯುತ್ತಿದ್ದರೆಂದು  ಹೇಳಿದ್ದ. ಅಪ್ಪಾ  ಅವರು ನನ್ನನ್ನು ಕೊಲ್ಲುತ್ತಾರೆ. ಈ ಪೊಲೀಸರು ನನ್ನನ್ನು ಕೊಂದೇಬಿಡುತ್ತಾರೆ ಎನ್ನುತ್ತಿದ್ದ,” ಎಂದು  ಮರಳಿ ಬಾರದ ಲೋಕಕ್ಕೆ ತೆರಳಿದ ತನ್ನ 15 ವರ್ಷದ ಪುತ್ರ ಆಗ್ನೆಲೋನ ಕೊನೆಯ ಮಾತುಗಳನ್ನು ನೆನೆಸುತ್ತಾ ಲಿಯೊನಾರ್ಡ್ ವಾಲ್ಡಾರಿಸ್  ದುಃಖಿಸುತ್ತಾರೆ. ಆಗ್ನೆಲೋ ಎಪ್ರಿಲ್ 18, 2014ರಂದು  ಆತನ ಬಂಧನವಾದ ಎರಡು ದಿನಗಳ ನಂತರ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ.

ಭಾರತದಲ್ಲಿ ಪೊಲೀಸರು ಕಾನೂನನ್ನು ಹೇಗೆ ಸುಲಭವಾಗಿ ಗಾಳಿಗೆ ತೂರುತ್ತಾರೆ, ಶಂಕಿತರ ಮೇಲೆ ದೌರ್ಜನ್ಯ ನಡೆಸಿ ನಂತರ ಇಂತಹ ದೌರ್ಜನ್ಯಗಳಿಗೆ ಕಾರಣರಾದವರನ್ನು ಯಾವ ರೀತಿಯಲ್ಲಿ ರಕ್ಷಿಸುತ್ತಾರೆಂಬುದನ್ನು ಆಗ್ನೆಲೊ ಎಂಬ ಆ ಬಾಲಕನ ಬಂಧನ, ಪೊಲೀಸ್ ಕಸ್ಟಡಿಯಲ್ಲಿ ಆತನಿಗೆ ನೀಡಲಾದ ಹಿಂಸೆ ಹಾಗೂ ಆತನ ಸಾವಿನ ಪೊಲೀಸ್ ತನಿಖೆಯ  ಮೈ ನಡುಕ ಹುಟ್ಟಿಸುವಂತಹ ಕಥೆ ನಮ್ಮ ಮುಂದಿಡುತ್ತದೆ.

ಆಗ್ನೆಲೋ ಬಂಧನ ಹಾಗೂ ಸಾವು, ವೈದ್ಯರು ನೀಡಿದ ವರದಿ, ಪೊಲೀಸ್ ಅಧಿಕಾರಿಗಳ ಸಾಕ್ಷ್ಯ ಮತ್ತಿತರ ವಿಚಾರಗಳ ದಾಖಲೆಗಳನ್ನು ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆ  2009 ಹಾಗೂ 2015ರ ನಡುವೆ ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿದ 18 ಸಾವುಗಳ  ಬಗ್ಗೆ ತಾನು ನಡೆಸಿದ ತನಿಖೆಯ ಭಾಗವಾಗಿ ಕ್ರೋಢೀಕರಿಸಿದೆ.

ಎಪ್ರಿಲ್ 16ರ ಮಧ್ಯರಾತ್ರಿ ಕಳೆದು ಸುಮಾರು 2 ಗಂಟೆಯ ಹೊತ್ತಿಗೆ ಮುಂಬೈಯ ವಡಾಲ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಆಗ್ನೆಲೊ ವಾಲ್ಡಾರಿಸನನ್ನು ಆತನ ತಾತನ ಮನೆಯಿಂದ ಕಳ್ಳತನ ಪ್ರಕರಣವೊಂದರಲ್ಲಿ ಶಂಕೆಯ ಆಧಾರದಲ್ಲಿ ಬಂಧಿಸಿದ್ದರು.  ಅದೇ ಅಪರಾಧದ ಪ್ರಕರಣದ ಸಂಬಂಧ ಇತರ ಮೂವರು – 23 ವರ್ಷದ ಸೂಫಿಯಾನ್ ಮೊಹಮ್ಮದ್ ಖಾನ್, 19 ವರ್ಷದ ಇರ್ಫಾನ್ ಹಜಮ್ ಹಾಗೂ 15 ವರ್ಷದ ಇನ್ನೊಬ್ಬ ಬಾಲಕನನ್ನು ಕೂಡ ಬಂಧಿಸಲಾಗಿತ್ತು.

ಲೋಕಲ್ ರೈಲು ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬನ ಎರಡು ಚಿನ್ನದ ಸರ, ಮೂರು ಉಂಗುರ ಹಾಗೂ ಸ್ವಲ್ಪ ನಗದು, ಕನ್ನಡಕ ಹಾಗೂ ಲಂಚ್ ಬಾಕ್ಸ್ ಕದ್ದ ಆರೋಪ ಒಪ್ಪಿಕೊಳ್ಳುವಂತೆ ಬಲವಂತಪಡಿಸುವ ಪ್ರಯತ್ನದ ಭಾಗವಾಗಿ ಪೊಲೀಸರು ನಾಲ್ಕು ಮಂದಿಗೂ ಚೆನ್ನಾಗಿ ಥಳಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಲಾಗಿದೆ. ತನ್ನನ್ನು ವಿವಸ್ತ್ರಗೊಳಿಸಿ, ಕಾಲು ಹಾಗೂ ಕೈಗಳ ನಡುವೆ ಕಬ್ಬಿಣದ ರಾಡನ್ನು ಕಟ್ಟಿ ತಲೆಕೆಳಗಾಗಿ ನೇತಾಡಿಸಿ ಮರದ ಬೆತ್ತ ಹಾಗೂ ಬೆಲ್ಟಿನಿಂದ ಹೊಡೆದಿದ್ದಾರೆಂದು ಸಿಬಿಐ ಮುಂದೆ ದಾಖಲಿಸಲಾದ ಹೇಳಿಕೆಯಲ್ಲಿ ಹಜಮ್ ಹೇಳಿದ್ದಾನೆ. ಬೆತ್ತವೊಂದನ್ನು ಉಪಯೋಗಿಸಿ ತನಗೆ ಲೈಂಗಿಕ ಹಿಂಸೆ ನೀಡಿ, ತನ್ನ ಜನನಾಂಗವನ್ನು ಪೆಟ್ರೋಲ್ ಸುರಿದು ಸುಡುವುದಾಗಿಯೂ ಅವರು ಬೆದರಿಸಿದ್ದಾರೆಂದು ಆತ ಆರೋಪಿಸಿದ್ದಾನೆ. ಇತರ ಶಂಕಿತರೊಂದಿಗೆ ಮೌಖಿಕ ಸೆಕ್ಸ್ ನಡೆಸುವಂತೆ ಬಲವಂತಪಡಿಸಲಾಯಿತೆಂದೂ ನಿರಾಕರಿಸಿದಾಗ ಚೆನ್ನಾಗಿ ಹಲ್ಲೆ ನಡೆಸಲಾಯಿತೆಂದೂ ಆತ ತನ್ನ ಹೇಳಿಕೆಯಲ್ಲಿ ತಿಳಿಸಿದ್ದ.

ಆಗ್ನೆಲೋನಿಗೆ ನೀಡಿದ ಹಿಂಸೆಯ ಬಗ್ಗೆಯೂ ಹಾಜಮ್ ಮತ್ತು ಇತರ ಸಹ ಆರೋಪಿಗಳು ಹೇಳಿದ್ದು ಆತನ ಎದೆಗೆ ಹಲವಾರು ಬಾರಿ ಒದೆಯಲಾಗಿತ್ತು ಹಾಗೂ ಬೆತ್ತ ಹಾಗೂ ಬೆಲ್ಟಿನಿಂದ ಆತನಿಗೆ ಹೊಡೆಯಲಾಗಿತ್ತು ಎಂದಿದ್ದಾರೆ.

ಕ್ರಿಮಿನಲ್ ಪ್ರೊಸೀಜರ್ ಕೋಡ್ ಅನ್ವಯ ಈ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ ಅಧಿಕಾರಿ ಯಾರು ಎಂದು ನಮೂದಿಸಿಲ್ಲ, ಬಂಧನದ ಮೆಮೋ ತಯಾರಿಸಿಲ್ಲ ಹಾಗೂ ಅವರ ಬಂಧನವಾದ ದಿನಾಂಕ ಹಾಗೂ ಸಮಯವನ್ನು ಕೂಡ ನಮೂದಿಸಿಲ್ಲ. ಈ ಎಲ್ಲಾ ಮಾಹಿತಿಯಿರುವ ದಾಖಲೆಯನ್ನು ಸ್ವತಂತ್ರ ಸಾಕ್ಷಿ ಮತ್ತು  ಬಂಧಿತ ವ್ಯಕ್ತಿ ಸಹಿ ಹಾಕಬೇಕಾಗಿದ್ದರೂ ಹಾಗೆ ಮಾಡಿಲ್ಲ ಹಾಗೂ ಬಂಧಿತರ ಸಂಬಂಧಿಕರಿಗೆ ಮಾಹಿತಿ ನೀಡಿಲ್ಲ.

ಆಗ್ನೆಲೋ ಹಾಗೂ ಆತನ ಸ್ನೇಹಿತರ ಬಂಧನವಾಗಿ 36 ಗಂಟೆಗಳ  ತರುವಾಯ ಪೊಲೀಸರು ಈ ಬಗ್ಗೆ ದಾಖಲೆ ತಯಾರಿಸಿದ್ದರು. ಈ ಸಂದರ್ಭ ವಡಾಲ ರೈಲ್ವೇ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಎಎಸ್ಸೈ ಒಬ್ಬರು ನಂತರ ಸಿಬಿಐ ಮುಂದೆ ಹೇಳಿಕೆ ದಾಖಲಿಸುವಾಗ ತಾನು ಪೊಲೀಸ್ ಜನರಲ್ ಡೈರಿಯಲ್ಲಿ ಹಿರಿಯ ಅಧಿಕಾರಿಯ ಕಟ್ಟಪ್ಪಣೆಯಂತೆ ತಪ್ಪಾಗಿ ಮಾಹಿತಿ ನಮೂದಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.

ಕೊನೆಗೂ ಆಗ್ನೆಲೋನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ವಿಫಲರಾದ ಪೊಲೀಸರು ಮರುದಿನ ಬೆಳಿಗ್ಗೆ ಆತ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಓಡುವಾಗ ರೈಲು ಬಡಿದು ಸತ್ತನೆಂದು  ಹೇಳಿದ್ದರು.

ಆಗ್ನೆಲೋನ ಬಂಧನವಾಗಿ 24 ಗಂಟೆಗಳೊಳಗಾಗಿ ನಿಯಮದಂತೆ ಆತನನ್ನು ಮ್ಯಾಜಿಸ್ಟ್ರೇಟರ ಮುಂದೆ ಪೊಲೀಸರು ಹಾಜರುಪಡಿಸಿಲ್ಲ. ಎಪ್ರಿಲ್ 16ರಂದು ಆತನ ತಂದೆ ಮುಂಬೈ ಪೊಲೀಸ್ ಆಯುಕ್ತರಿಗೆ ತಮ್ಮ ಮಗನ ಬಂಧನದ ಬಗ್ಗೆ ಪತ್ರ ಬರೆದು ಆತನನ್ನು ಇನ್ನೂ  ಕೋರ್ಟಿಗೆ  ಹಾಜರುಪಡಿಸಲಾಗಿಲ್ಲ, ಆತ ಎಲ್ಲಿದ್ದನೆಂದು ಗೊತ್ತಿಲ್ಲ ಎಂದು ಹೇಳಿದ್ದರು. ಮರುದಿನ ಅವರು ತಮ್ಮ ಮಗನನ್ನು ಕೂಡಲೇ ಹಾಜರುಪಡಿಸುವಂತೆ ಆದೇಶ ನೀಡುವಂತೆ ಕೋರಿ ಕೋರ್ಟಿನ ಮೊರೆ ಹೋಗಿದ್ದರು ಹಾಗೂ ಕೋರ್ಟ್ ಕೂಡ ಅಂತೆಯೇ ಆದೇಶ ನೀಡಿತ್ತು. ಆದರೆ ಬಂಧನವಾಗಿದೆ ಎಂದು ಮಾಹಿತಿ ನೀಡಿದ ಪೊಲೀಸರು ಆಗ್ನೆಲೋನನ್ನು ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಹೇಳಿ ಆತನನ್ನು ಹಾಜರುಪಡಿಸಿರಲಿಲ್ಲ. ಬಂಧನವಾಗಿ 38 ಗಂಟೆಗಳ ತರುವಾಯ ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಿ ಪೊಲಿಸರು ನಿಯಮ ಉಲ್ಲಂಘಿಸಿದ್ದರು. ತಪಾಸಣೆ ವೇಳೆ ತನ್ನ ಮೇಲೆ ಪೊಲೀಸ್ ದೌರ್ಜನ್ಯವಾಗಿದ್ದನ್ನು ಆಗ್ನೆಲೋ ವೈದ್ಯರಿಗೆ ಹೇಳಿದ್ದ. ವೈದ್ಯರು ಸಿಬಿಐ ಮುಂದೆ ನೀಡಿದ ಹೇಳಿಕೆಯಲ್ಲಿ ಪೊಲೀಸರು ಅವರಿಗೆ ಅನುಕೂಲಕರ ವರದಿ ತಯಾರಿಸುವಂತೆ ತನ್ನ ಮೇಲೆ ಒತ್ತಡ ಹೇರಿದ್ದರೆಂದು ಹಾಗೂ ಆಗ್ನೆಲೋ  ಸ್ವಯಂ ತನ್ನನ್ನು ಗಾಯಗೊಳಿಸಿದ್ದ ಎಂದು ಬರೆಯಲು ಹೇಳಿದ್ದರೆಂದು ಬಹಿರಂಗಪಡಿಸಿದ್ದರು.

ಕೊನೆಯದಾಗಿ ಈ ಪ್ರಕರಣದಲ್ಲಿ ಪೊಲೀಸರು ಬಾಲಾಪರಾಧಿಗಳ ಕಾಯಿದೆಯನ್ನೂ ಉಲ್ಲಂಘಿಸಿದ್ದರು. ಈ ಕಾಯಿದೆಯನ್ವಯ 15 ವರ್ಷದ ಆಗ್ನೆಲೋನನ್ನು  ವಿಶೇಷ ಬಾಲಾಪರಾಧಿಗಳ ಪೊಲೀಸ್ ಘಟಕ ಅಥವಾ  ಸಂಬಂಧಿತ ಮಕ್ಕಳ ಕಲ್ಯಾಣ ಅಧಿಕಾರಿಯ ವಶಕ್ಕೆ ಒಪ್ಪಿಸಬೇಕಾಗಿದ್ದರೂ ಆತನನ್ನು ಇತರರಂತೆಯೇ ಸಾಮಾನ್ಯ ಪೊಲೀಸ್ ಕಸ್ಟಡಿಯಲ್ಲಿಡಲಾಗಿತ್ತು. ನಂತರ ಆಗ್ನೆಲೋ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾಗ ಪೊಲೀಸರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ವ ಪ್ರಯತ್ನ ಪಟ್ಟರು. ಅವರು ಆತನ ಬಂzsನವಾದ ದಿನಾಂಕ ಹಾಗೂ ಸಮಯವನ್ನು ಬದಲಾಯಿಸಿದ್ದರು. ನಂತರ ಅವರು ವೈದ್ಯಕೀಯ ವರದಿಯನ್ನು ತಮಗೆ ಬೇಕಾದಂತೆ ಸಿದ್ಧಪಡಿಸಲು ಯತ್ನಿಸಿದ್ದÀರು. ಆಗ್ನೆಲೋನಿಗಾದ ಗಾಯ ಆತನೇ ಮಾಡಿಕೊಂಡಿದ್ದನೆನ್ನುವುದನ್ನು ಆಗ್ನೆಲೋ ಹಾಗೂ ವೈದ್ಯರು ಒಪ್ಪುವುದಿಲ್ಲವೆಂದಾಗ ಪೊಲೀಸರು ಆಗ್ನೆಲೋನ ತಂದೆಗೆ ಸುಳ್ಳು ಹೇಳಿಕೆಗೆ ಸಹಿ ಹಾಕುವಂತೆ ಒತ್ತಾಯ ಪಡಿಸಿದ್ದರು.

ಕೊನೆಗೂ ಆಗ್ನೆಲೋನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ವಿಫಲರಾದ ಪೊಲೀಸರು ಮರುದಿನ ಬೆಳಿಗ್ಗೆ ಆತ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಓಡುವಾಗ ರೈಲು ಬಡಿದು ಸತ್ತನೆಂದು  ಹೇಳಿದ್ದರು.

“ನನ್ನ ಮಗ ಮ್ಯಾಜಿಸ್ಟ್ರೇಟರ ಎದುರು ಪೊಲೀಸರು ನಡೆಸಿದ ದೌರ್ಜನ್ಯವನ್ನು ಬಹಿರಂಗ ಪಡಿಸಬಹುದೆಂಬ ಭಯದಿಂದ ಪೊಲೀಸರು ಆತನನ್ನು ಕೊಂದುಬಿಟ್ಟರು” ಎಂದು ಲಿಯೊನಾರ್ಡ್ ಹೇಳುತ್ತಾರೆ.

ಪೊಲೀಸರು ಆರಂಭದಲ್ಲಿ ತಮ್ಮ ಸಹೋದ್ಯೋಗಿಗಳನ್ನು ರಕ್ಷಿಸಲು ಯತ್ನಿಸಿದರೂ ಲಿಯೊನಾರ್ಡ್ ಮತ್ತು  ಇತರ ಆರೋಪಿಗಳು ಈ ಪ್ರಕರಣ ಸಿಬಿಐಗೆ ವಹಿಸಬೇಕೆಂದು ಕೋರಿ ಬಾಂಬೆ ಹೈಕೋರ್ಟಿನ ಮೊರೆಹೋದರು. 2016ರಲ್ಲಿ ಸಿಬಿಐ ಈ ಪ್ರಕರಣದಲ್ಲಿ ಮಹಿಳಾ ಪೊಲೀಸಳೊಬ್ಬಳು ಸೇರಿದಂತೆ ಎಂಟು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿತು. ಅವರಲ್ಲಿ ಮೂವರ ಮೇಲೆ  ಪೋಕ್ಸೋ ಕಾಯಿದೆಯನ್ವಯ ಕೂಡ ಪ್ರಕರÀಣ ದಾಖಲಿಸಲಾಯಿತು.

ಈ ಪ್ರಕರಣದ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ.

“ಪೊಲೀಸರ ಮೇಲೆ ನಂಬಿಕೆಯಿರಿಸಿ ಅವರು ನ್ಯಾಯ ಒದಗಿಸುತ್ತಾರೆಂದು ನಂಬಿ ನನ್ನ ಮಗನನ್ನು  ಅವರಿಗೆ ಒಪ್ಪಿಸಿದೆ, ಅವರ ತನಿಖೆಯಲ್ಲಿ ಸಹಕರಿಸಿದೆ. ಈಗ ಅಪರಾಧಿ ಭಾವ ನನ್ನನ್ನು ಕಾಡುತ್ತಿದೆ. ನನ್ನ ಮಗನನ್ನು ಪೊಲೀಸರಿಗೆ ಹಸ್ತಾಂತರಿಸಲೇ ಬಾರದಿತ್ತು. ನಾನು ಹಾಗೆ ಮಾಡಿದ್ದರೆ ಅವನು ಇಂದು ಬದುಕುಳಿದಿರುತ್ತಿದ್ದ” ಎಂದು ಲಿಯೊನಾರ್ಡ್ ನೋವಿನಿಂದ ಹೇಳುತ್ತಾರೆ.