ಹಲ್ಲೆಗೆ ಪ್ರತಿಕಾರ : ತಂದೆಯಿಂದ ಮಗನ ಹತ್ಯೆ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಹೊಸ ವರ್ಷದ ದಿನ ಕುಡಿದ ಮತ್ತಿನಲ್ಲಿ ಮನೆಯಲ್ಲಿ ದಾಂಧಲೆ ನಡೆಸಿದ್ದಲ್ಲದೆ ಬುದ್ಧಿವಾದ ಹೇಳಿದ ತಂದೆಯ ಮೇಲೆ ಹಲ್ಲೆಗೈದು ಪರಾರಿಯಾಗಿದ್ದ ಮಗನನ್ನು ಮತ್ತೆ ಮನೆಗೆ ಬಂದ ದಿನವೇ ಪಾನಮತ್ತ ತಂದೆ ಮತ್ತು ಸಹೋದರ ಚೂರಿ ಇರಿತದಿಂದ ಕೊಲೆಗೈಯ್ದಿದ್ದಾರೆ.

ಬೆಳ್ತಂಗಡಿ ಕಸಬಾ ಗ್ರಾಮದ ಮಟ್ಲ ಎಂಬಲ್ಲಿನ ನಿವಾಸಿ ನವೀನ ಎಂಬಾತನೇ ಕ್ಷುಲ್ಲಕ ಕಾರಣಕ್ಕಾಗಿ ಈತನ ತಂದೆ ಮಂಜುನಾಥ ಮತ್ತು ಸಹೋದರ ರಾಘವೇಂದ್ರ ಎಂಬವರಿಂದ ಕೊಲೆಯಾದ ಯುವಕ. ಮೂಲತಃ ಹಾಸನದ ನಿವಾಸಿಗಳಾದ ಮಂಜುನಾಥ ಹಾಗೂ ಕುಟುಂಬ ಕಳೆದ ಹಲವು ವರ್ಷಗಳಿಂದ

ನಗರದಲ್ಲಿ ಜ್ಯೋತಿಷ್ಯಾಲಯವನ್ನು ತೆರೆದು ಪರಿಚಿತರಾಗಿದ್ದರು. ಆರೋಪಿ ಮಂಜುನಾಥನ ಪುತ್ರ ರಾಘವೇಂದ್ರ ಕೂಡಾ ಪ್ರತ್ಯೇಕ ಜ್ಯೋತಿಷ್ಯಾಲಯವೊಂದನ್ನು ನಡೆಸಿಕೊಂಡಿದ್ದು, ಸಹೋದರ ನವೀನ ತೋಟವನ್ನು ನೋಡಿಕೊಂಡಿರುತ್ತಿದ್ದ.

ಸ್ಥಳೀಯ ಪ್ರಕಾರ, ತಂದೆ ಮತ್ತು ಮಕ್ಕಳು ಕುಡಿತದ ಚಟ ಹೊಂದಿದ್ದು ಆಗಾಗ ಜಗಳ, ಹೊಡೆದಾಟ ಮಾಡಿಕೊಳ್ಳುತ್ತಲೇ ಇರುತ್ತಿದ್ದರು. ಇದೇ ರೀತಿ ಕಳೆದ ಡಿಸೆಂಬರ್ 31ರಂದು ರಾತ್ರಿ ಮನೆಯಲ್ಲಿ ತಂದೆ ಮಂಜುನಾಥ, ಮಗ ನವೀನ ನಡುವೆ ಗಲಾಟೆಯಾಗಿತ್ತು. ಹೊಸ ವರ್ಷಾಚರಣೆಯ ಹೆಸರಲ್ಲಿ ವಿಪರೀತ ಕುಡಿದು ಮನೆಯಲ್ಲಿ ದಾಂಧಲೆ ನಡೆಸಿದ ಮಗನನ್ನು ಪ್ರಶ್ನಿಸಿ ಬುದ್ಧಿವಾದ ಹೇಳಿದಾಗ ತಂದೆ ಮಂಜುನಾಥ ಮತ್ತು

ಮಗ ನವೀನ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡು ಗಾಯಗೊಂಡಿದ್ದರು.

ಇವರ ಹೊಡೆದಾಟ, ಜಗಳ ಪೊಲೀಸ್ ಠಾಣೆ ಮೆಟ್ಟಲೇರಿದ್ದರೂ ಬಳಿಕ ಪ್ರಕರಣವನ್ನು ಮಾತುಕತೆಯಲ್ಲಿ ಇತ್ಯರ್ಥಗೊಳಿಸಲಾಗಿತ್ತು. ಆದರೆ ಬಳಿಕ ಮಗ ನವೀನ ಮನೆ ಬಿಟ್ಟು ಹೋಗಿದ್ದು, ರವಿವಾರವಷ್ಟೇ ಮನೆಗೆ ಬಂದ ಈತ ಹಳೆಯ ಜಗಳವನ್ನು ಮತ್ತೆ ಪ್ರಸ್ತಾಪಿಸಿಕೊಂಡು ಜಗಳ ಮಾಡಿಕೊಂಡ ಪರಿಣಾಮ ಡಿಸೆಂಬರ್ 31ರ ರಾತ್ರಿಯ ಹಲ್ಲೆಗೆ ಪ್ರತಿಕಾರವಾಗಿ ನವೀನನ್ನು ಮಂಜುನಾಥ ಮತ್ತು ಇನ್ನೊಬ್ಬ ಮಗ ರಾಘವೇಂದ್ರ ಕೊಲೆಗೈದಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ರವಿವಾರ ರಾತ್ರಿ ವೇಳೆ ತಂದೆ ಮಗನ ನಡುವೆ ಮನೆಯಲ್ಲಿ ಮತ್ತೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ತಂದೆ ಮಂಜುನಾಥÀ ಹಾಗೂ ಸಹೋದರ ರಾಘವೇಂದ್ರ ಸೇರಿಕೊಂಡು ನವೀನನಿಗೆ ಚೂರಿಯಿಂದ ಎದೆ, ಕುತ್ತಿಗೆ ಹಾಗೂ ಹೊಟ್ಟೆಗೆ ಇರಿದು ಹತ್ಯೆ ಮಾಡಿದ್ದಾರೆ. ಕೊಲೆಯ ಬಳಿಕ ಇಬ್ಬರೂ ಸೇರಿ ತಮ್ಮ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯರು ಈ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದ್ದು, ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ನವೀನನ ಪತ್ನಿ ಬೇಬಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜೈಲು ಪಾಲಾದ  ಆರೋಪಿಗಳು

ಕೊಲೆ ನಡೆಸಿದ ಬೆನ್ನಲ್ಲೆ ಮನೆಗೆ ಬಾಗಿಲೂ ಹಾಕಿಕೊಳ್ಳದೆ ಝೈಲೊ ಕಾರಿನಲ್ಲಿ ಪರಾರಿಯಾಗಿ ತಲೆಮರೆಸಿಕೊಳ್ಳುವ ಯತ್ನದಲ್ಲಿದ್ದ ಆರೋಪಿಗಳಾದ ತಂದೆ, ಮಗನನ್ನು ಚಿಕ್ಕಮಗಳೂರು ಸಮೀಪ ಬೆಳ್ತಂಗಡಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಹೋಗಿರುವ ಕಾರಿನ ಮಾಹಿತಿ ಪಡೆದ ಪೊಲೀಸರು ಕೂಡಲೇ ಕಾರ್ಯಾಚರಣೆ ಆರಂಭಿಸಿದ ಕಾರಣ ಇಬ್ಬರೂ ಜೈಲು ಪಾಲಾಗಿದ್ದಾರೆ. ಬೆಳ್ತಂಗಡಿ ಸರ್ಕಲ್ ಇನ್ಸಪೆಕ್ಟರ್ ನಾಗೇಶ್ ಕದ್ರಿ ಹಾಗೂ ಪಿಎಸೈ ರವಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

ಜನರಿಗೆ ವಂಚನೆ : ಆರೋಪ

ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನ ಕೆಲವೆಡೆಗಳಲ್ಲಿ ಜ್ಯೋತಿಷ್ಯಾಲಯಗಳನ್ನು ನಡೆಸುತ್ತಿರುವ ಮಂಜುನಾಥ ಹಾಗೂ ರಾಘವೇಂದ್ರನ ವಿರುದ್ಧ ಈಗಾಲೆ ಜನರಿಗೆ ವಂಚನೆ ಮಾಡಿರುವ ಬಗ್ಗೆ ಹಲವಾರು ಆರೋಪಗಳು ಆಗಾಗ ಕೇಳಿ ಬರುತ್ತಿತ್ತು. ಇದೇ ನೆಪದಲ್ಲಿ ಜ್ಯೋತಿಷ್ಯರನ್ನು ಬ್ಲ್ಯಾಕ್ಮೇಲ್ ಮಾಡಿದವರೂ ಇದ್ದಾರೆ. ಜ್ಯೋತಿಷ್ಯಕ್ಕಾಗಿ ಬಂದು ಹಣ ಕಳೆದುಕೊಂಡವರು ದೂರು ನೀಡಲು ಮುಂದೆ ಬಾರದ ಹಿನ್ನಲೆಯಲ್ಲಿ ಇವರು ಪಾರಾಗುತ್ತಿದ್ದರು. ವರ್ಷದ ಹಿಂದೆ ಇವರಿಂದ ವಂಚನೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿ ತನ್ನ ಕೈಯಿಂದ ಹಣ ಪಡೆದು ವಂಚಿಸಿರುವುದಾಗಿ ಆರೋಪಿಸಿದ್ದ. ಬಳಿಕ ಮಂಜುನಾಥ ಪ್ರಕರಣದಿಂದ ಪಾರಾಗಿದ್ದೇ ಮತ್ತೊಂದು ಸಂಶಯಕ್ಕೆ ಕಾರಣವಾಗಿತ್ತು.

LEAVE A REPLY