ಆಕಸ್ಮಿಕ ಸಿಡಿದ ಗುಂಡಿನಿಂದ ಪುತ್ರ ಸಾವನ್ನಪ್ಪಿದ್ದಾನೆಂಬ ಶಂಕೆಯಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆಗೈದ

ಕೊಚ್ಚಿ  : ಬಂದೂಕು ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಸಿಡಿದ ಗುಂಡು ಪುತ್ರನ ಸಾವಿಗೆ ಕಾರಣವಾಗಿದೆ ಎಂದು ತಪ್ಪಾಗಿ ತಿಳಿದುಕೊಂಡ ವ್ಯಕ್ತಿಯೊಬ್ಬ ತೀವ್ರ ಆಘಾತಕ್ಕೊಳಗಾಗಿ ತಾನೂ ಶೂಟ್ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಇಲ್ಲಿನ ಆಂಗಪಳ್ಳಿ ಸಮೀಪದ ಅಯ್ಯಂಫುಝದ ಕುವಂಗಲ್ ಮನೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಮ್ಯಾಥ್ಯೂ (55) ಎಂದು ಗುರುತಿಸಲಾಗಿದೆ. ಈತ ಬ್ಯಾಂಕೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ. ಭಾನುವಾರ ಬಂದೂಕು ಕ್ಲೀನ್ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು ಪುತ್ರ ಮನು ಮ್ಯಾಥ್ಯೂ(20)ಗೆ ಬಡಿದು ಆತ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ.

ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಮನು ನೀಡಿರುವ ಹೇಳಿಕೆಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. “ಸಿಡಿದ ಗುಂಡಿನಿಂದ ನಾನು ಸಾವನ್ನಪ್ಪಿದ್ದೇನೆ ಎಂದು ಭಯಗೊಂಡು ತಂದೆ ತಮ್ಮನ್ನು ಶೂಟ್ ಮಾಡಿಕೊಂಡಿದ್ದಾರೆ”  ಎಂದು ಮನು ಅಯ್ಯಂಫುಝ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ವಿವರಿಸಿದ್ದಾನೆ.